ಅಕ್ಷರ ಗಾತ್ರ

ಭೂಕಂಪದ ವೇಳೆ ಲ್ಯಾಂಡಿಂಗ್ʼಗೆ ಸಜ್ಜಾಗಿದ್ದ ವಿಮಾನ ಮತ್ತೆ ಆಕಾಶಕ್ಕೆ ಹಾರಾಟ: ವಿಮಾನ ನಿಲ್ದಾಣದಲ್ಲಿ ಕಂಪನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೂಕಂಪದ ವೇಳೆ ಲ್ಯಾಂಡಿಂಗ್ʼಗೆ ಸಜ್ಜಾಗಿದ್ದ ವಿಮಾನ ಮತ್ತೆ ಆಕಾಶಕ್ಕೆ ಹಾರಾಟ: ವಿಮಾನ ನಿಲ್ದಾಣದಲ್ಲಿ ಕಂಪನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವಾಷಿಂಗ್ಟನ್‌: ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ (LAX) ಕಂಪನ ಉಂಟಾಗಿದೆ. ವಿಮಾನ ನಿಲ್ದಾಣದಲ್ಲಿ ಭೂಕಂಪ ಸಂಭವಿಸಿದ ವೇಳೆ ಲ್ಯಾಂಡಿಂಗ್‌ಗೆ ಸಜ್ಜಾಗಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನವನ್ನು ಪೈಲಟ್‌ ಮತ್ತೆ ಮೇಲಕ್ಕೆ ಹಾರಿಸಿದ್ದು, ಆತಂಕದ ಕ್ಷಣಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಮಾನ ರನ್‌ವೇಗೆ ಸಮೀಪಿಸುತ್ತಿದ್ದ ಸಂದರ್ಭದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ವೇಳೆ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಕರು (ATC), ಲ್ಯಾಂಡಿಂಗ್‌ಗೆ ಸಜ್ಜಾಗಿದ್ದ ವಿಮಾನದ ಪೈಲಟ್‌ಗೆ ಭೂಕಂಪದ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೈಲಟ್ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ವಿಮಾನವನ್ನು ಮತ್ತೆ ಮೇಲಕ್ಕೆ ಹಾರಿಸಿದ್ದಾರೆ.

ಡೆಲ್ಟಾ ಏರ್‌ಲೈನ್ಸ್‌ನ DL1972 ವಿಮಾನವು ಕಾನ್ಸಾಸ್ ಸಿಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (MCI) ಲಾಸ್ ಏಂಜಲೀಸ್‌ಗೆ ಪ್ರಯಾಣಿಸುತ್ತಿತ್ತು. ಶನಿವಾರ ಬೆಳಗ್ಗೆ 8:08ಕ್ಕೆ ಕಾನ್ಸಾಸ್ ಸಿಟಿಯಿಂದ ಹೊರಟಿದ್ದ ವಿಮಾನ ಸುಮಾರು ನಾಲ್ಕು ಗಂಟೆಗಳ ಪ್ರಯಾಣದ ಬಳಿಕ ಲಾಸ್ ಏಂಜಲೀಸ್ ವಿಮಾನ ನಿಲ್ದಾಣವನ್ನು ಸಮೀಪಿಸಿತ್ತು. ಇದೇ ವೇಳೆ ಭೂಕಂಪ ಸಂಭವಿಸಿದೆ.

ಭೂಕಂಪದ ವೇಳೆ ವಾಯು ಸಂಚಾರ ನಿಯಂತ್ರಕರು ಪೈಲಟ್‌ಗೆ ಮಾಹಿತಿ ನೀಡುತ್ತಿರುವ ಧ್ವನಿ ವಿಡಿಯೋದಲ್ಲಿ ದಾಖಲಾಗಿದೆ. “ಭೂಕಂಪ ಸಂಭವಿಸುತ್ತಿದೆ, ನೀವು ಹೋಗಿ” ಎಂದು ಅಧಿಕಾರಿಗಳು ಸೂಚಿಸಿರುವುದು ರೆಕಾರ್ಡ್ ಆಗಿದೆ. ಈ ಸೂಚನೆ ದೊರೆಯುತ್ತಿದ್ದಂತೆ ಪೈಲಟ್ ಲ್ಯಾಂಡಿಂಗ್ ಮುಂದೂಡಿ ವಿಮಾನವನ್ನು ಮೇಲಕ್ಕೆ ಹಾರಿಸಿದ್ದಾರೆ.

ಭೂಕಂಪದ ಕಂಪನದಿಂದ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಟರ್ಮಿನಲ್‌ನ ಒಳಭಾಗದಲ್ಲಿದ್ದ ಸೀಲಿಂಗ್ ಟೈಲ್ಸ್‌ಗಳು ನೆಲಕ್ಕೆ ಬಿದ್ದಿವೆ ಎಂದು ವರದಿಯಾಗಿದೆ. ಸುಮಾರು 30 ಸೆಕೆಂಡುಗಳ ಕಾಲ ಕಂಪನ ಅನುಭವವಾಗಿದ್ದು, ವಿಮಾನ ನಿಲ್ದಾಣ ಹಾಗೂ ನಗರದ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

ಈ ಘಟನೆಯಲ್ಲಿ ಯಾವುದೇ ಪ್ರಮುಖ ಹಾನಿ ಅಥವಾ ಗಾಯಗಳಾದ ವರದಿಯಾಗಿಲ್ಲ. ಭೂಕಂಪದ ಸಂದರ್ಭದಲ್ಲೇ ವಿಮಾನ ಲ್ಯಾಂಡಿಂಗ್ ಸ್ಥಗಿತಗೊಳಿಸಿದ ಪೈಲಟ್‌ನ ನಿರ್ಧಾರದಿಂದ ಸಂಭವನೀಯ ಅಪಾಯ ತಪ್ಪಿದಂತಾಗಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.