ಬೆಂಗಳೂರು: ಹೈಟೆನ್ಷನ್ ವಿದ್ಯುತ್ ತಂತಿಯಲ್ಲಿ ನಾಲ್ಕು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಹದ್ದಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಗಾಳಿಪಟದ ಮಾಂಜಾ ದಾರದಲ್ಲಿ ಸಿಲುಕಿ ಹಾರಲಾಗದೆ ನೇತಾಡುತ್ತಿದ್ದ ಹದ್ದನ್ನು ಅರಣ್ಯ ಇಲಾಖೆ, ಬೆಸ್ಕಾಂ ಹಾಗೂ ರಕ್ಷಣಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗಾಳಿಪಟದ ಮಾಂಜಾ ದಾರ ಹೈಟೆನ್ಷನ್ ವೈರ್‌ಗೆ ಸಿಲುಕಿಕೊಂಡಿದ್ದು, ಅದೇ ದಾರದಲ್ಲಿ ಹದ್ದು ಸಿಕ್ಕಿಹಾಕಿಕೊಂಡಿತ್ತು. ಹೀಗಾಗಿ ನಾಲ್ಕು ದಿನಗಳಿಂದ ಹಾರಲು ಸಾಧ್ಯವಾಗದೆ ತಂತಿಯ ಮೇಲೆಯೇ ನೇತಾಡುತ್ತಿತ್ತು. ಆಹಾರ ಮತ್ತು ನೀರಿಲ್ಲದೆ ಹದ್ದು ನಿತ್ರಾಣಗೊಂಡಿತ್ತು.
ಇದನ್ನು ಗಮನಿಸಿದ ಸ್ಥಳೀಯ ವಿಕಾಸ್ ತಡಮಾಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ, ಬೆಸ್ಕಾಂ ಮತ್ತು ರಕ್ಷಣಾ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ. ಕೊನೆಗೆ ಮಾಂಜಾ ದಾರವನ್ನು ಕತ್ತರಿಸಿ ಹದ್ದನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಹದ್ದಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸಂಪೂರ್ಣ ಚೇತರಿಸಿಕೊಂಡ ಬಳಿಕ ಮತ್ತೆ ಕಾಡಿಗೆ ಬಿಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಪಕ್ಷಿಗಳ ಪಾಲಿಗೆ ಮಾರಕವಾಗಬಹುದು. ಹೀಗಾಗಿ ಇಂತಹ ದಾರ ಬಳಸದಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.