ಅಕ್ಷರ ಗಾತ್ರ

ಮೈಸೂರು ಕರ್ನಾಟಕದ ಸಾಂಸ್ಕೃತಿಕ ಆತ್ಮ, ನಾನು ದಸರಾ ಉದ್ಘಾಟಿಸುವಷ್ಟು ದೊಡ್ಡ ವ್ಯಕ್ತಿಯಲ್ಲ: ಗವಿಮಠದ ಶ್ರೀಗಳು

ಮೈಸೂರು ದಸರಾ ಮಹೋತ್ಸವದ ವೇದಿಕೆಯಲ್ಲಿ ಮೈಕ್ ಮುಂದೆ ಮಾತನಾಡುತ್ತಿರುವ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ.

ಮೈಸೂರು: ಮೈಸೂರು ಇಡೀ ಕರ್ನಾಟಕದ ಸಾಂಸ್ಕೃತಿಕ ಆತ್ಮ. ಇದು ಸಂಸ್ಕಾರ, ಅರಿವು ಹಾಗೂ ಗುರುಪರಂಪರೆಯ ನೆಲೆವೀಡು. ಅತ್ಯಂತ ಸ್ವಚ್ಛತೆ ಮತ್ತು ಶಿಸ್ತಿಗೆ ಹೆಸರಾದ ನಗರ ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಣ್ಣಿಸಿದರು.

ವಿಶ್ವವಿಖ್ಯಾತ 416ನೇ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ತಮ್ಮ ಸರಳತೆ, ವಿನಮ್ರತೆ ಹಾಗೂ ಪಾಂಡಿತ್ಯಪೂರ್ಣ ಮಾತುಗಳ ಮೂಲಕ ನೆರೆದಿದ್ದವರ ಮನಗೆದ್ದರು.

“ದಸರಾವನ್ನು ಉದ್ಘಾಟಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಾನು ಇಲ್ಲಿಗೆ ದಸರಾ ಉದ್ಘಾಟನೆ ಮಾಡಲು ಬಂದಿಲ್ಲ. ಈ ಹಿಂದೆ ದಸರಾ ಉದ್ಘಾಟಿಸಿದ ಮಹಾನ್ ಜ್ಞಾನಿಗಳು ಹಚ್ಚಿದ ಪ್ರಾರ್ಥನೆಯ ದೀಪ ಆರದಿರಲಿ ಎಂದು ಶಕ್ತಿದೇವತೆ ಚಾಮುಂಡೇಶ್ವರಿಯ ಬಳಿ ಪ್ರಾರ್ಥಿಸಲು ಬಂದಿದ್ದೇನೆ. ನಾನು ಕೇವಲ ಜೋಳಿಗೆ ಜಂಗಮ ಅಷ್ಟೇ. ನನ್ನಿಂದ ಪ್ರಾರ್ಥನೆ ಸಲ್ಲಿಸಲು ಮಾತ್ರ ಸಾಧ್ಯ. ನಾಡಿನ ಸುಖ-ಶಾಂತಿಗಾಗಿ ಪ್ರಾರ್ಥಿಸಲು ಇಲ್ಲಿಗೆ ಬಂದಿದ್ದೇನೆ” ಎಂದು ಶ್ರೀಗಳು ವಿನಮ್ರವಾಗಿ ನುಡಿದರು.

ಮೈಸೂರು ದಸರಾ ಇತಿಹಾಸವನ್ನು ಸ್ಮರಿಸಿದ ಅವರು, ಕೊಪ್ಪಳದ ಗಂಡುಗಲಿ ಕುಮಾರರಾಮನ ಕಾಲದಿಂದ ದಸರಾ ಸಂಭ್ರಮ ಆರಂಭವಾಯಿತು ಎಂದು ಅಭಿಪ್ರಾಯಪಟ್ಟರು. “ತುಂಗಭದ್ರೆಯ ತೀರದಿಂದ ಹರಿದು ಬಂದ ಈ ಸಂಭ್ರಮ ಇಂದು ಕಾವೇರಿಯ ತೀರಕ್ಕೆ ತಲುಪಿದೆ. ಒಂದು ಕಾಲದಲ್ಲಿ ದೊರೆಗಳ ಹಬ್ಬವಾಗಿದ್ದ ದಸರಾ, ಇಂದು ಇಡೀ ಧರೆಯ ಹಬ್ಬವಾಗಿ ಬದಲಾಗಿದೆ” ಎಂದು ಹೇಳಿದರು. ಇದೇ ವೇಳೆ ಸುತ್ತೂರು ಶ್ರೀಗಳಿಗೂ ಭಕ್ತಿಪೂರ್ವಕ ವಂದನೆ ಸಲ್ಲಿಸಿದರು.

ಕರ್ನಾಟಕದ ಇತಿಹಾಸದಲ್ಲಿ ಮೈಸೂರು ರಾಜಮನೆತನದ ಕೊಡುಗೆಯನ್ನು ಸ್ಮರಿಸಿದ ಗವಿಸಿದ್ದೇಶ್ವರ ಶ್ರೀಗಳು, ಮೈಸೂರು ಅರಸರನ್ನು ಹೊರಗಿಟ್ಟು ರಾಜ್ಯದ ಇತಿಹಾಸವನ್ನು ನೋಡಲು ಸಾಧ್ಯವಿಲ್ಲ ಎಂದರು. “ಅಂದಿನ ಕಾಲದಲ್ಲೇ ಮಾದರಿ ಅಭಿವೃದ್ಧಿಯ ರಾಜ್ಯವನ್ನು ಕಟ್ಟಿದವರು ಮೈಸೂರು ಅರಸರು. ಅವರು ಕೇವಲ ನೆಲವನ್ನು ಆಳಲಿಲ್ಲ, ಬದಲಿಗೆ ಜನರ ಮನಸ್ಸುಗಳನ್ನು ಆಳಿದರು” ಎಂದು ರಾಜಮನೆತನದ ಸಾಧನೆಗಳನ್ನು ಕೊಂಡಾಡಿದರು.

ಸಮಾಜಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮಠಮಾನ್ಯಗಳು ನೀಡಿದ ಕೊಡುಗೆಯನ್ನು ಉಲ್ಲೇಖಿಸಿದ ಶ್ರೀಗಳು, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಸೇವೆಯನ್ನು ಸ್ಮರಿಸಿದರು. “ಇಂದು ನಮಗೆ 10 ಮಕ್ಕಳನ್ನು ಸಾಕುವುದೇ ಕಷ್ಟ ಎನಿಸುತ್ತದೆ. ಆದರೆ ಕೇವಲ ಭಿಕ್ಷಾನ್ನದ ಜೋಳಿಗೆಯನ್ನು ನಂಬಿ ಹತ್ತಾರು ಸಾವಿರ ಬಡ ಮಕ್ಕಳನ್ನು ಸಾಕಿ, ಸಲಹಿ, ವಿದ್ಯಾಬುದ್ಧಿ ನೀಡಿದ ಮಹಾಗುರುಗಳು ನಡೆದಾಡುವ ದೇವರಾದ ಸಿದ್ಧಗಂಗಾ ಶ್ರೀಗಳು” ಎಂದು ಭಕ್ತಿಪೂರ್ವಕವಾಗಿ ಸ್ಮರಿಸಿದರು.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

NTV ಕನ್ನಡ ಸಂಪಾದಕೀಯ ತಂಡ.