ಬೆಂಗಳೂರು: ಮದುವೆ ಸೀಸನ್ನಲ್ಲಿ ಚಿನ್ನ ಖರೀದಿಸುವ ಯೋಜನೆಯಲ್ಲಿದ್ದವರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ.
ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ ಇಳಿಕೆಯ ಹಾದಿಯಲ್ಲಿದ್ದು, ಕೇವಲ 10 ದಿನಗಳಲ್ಲೇ 10 ಗ್ರಾಂ ಚಿನ್ನದ ದರ ಬರೋಬ್ಬರಿ 14,720 ರೂಪಾಯಿ ಕಡಿಮೆಯಾಗಿದೆ. ಬೆಲೆ ಇಳಿಕೆಯ ಬೆನ್ನಲ್ಲೇ ಬೆಂಗಳೂರಿನ ಆಭರಣ ಮಳಿಗೆಗಳಲ್ಲಿ ಖರೀದಿ ಭರಾಟೆಯೂ ಜೋರಾಗಿದೆ.
ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಗ್ರಾಹಕರು ಬೆಲೆ ಇಳಿಕೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಡಿಸೆಂಬರ್ 15ರವರೆಗೂ ಮದುವೆ ಕಾರ್ಯಕ್ರಮಗಳು ನಡೆಯಲಿರುವುದರಿಂದ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರಿನ ಚಿನ್ನದ ಅಂಗಡಿಗಳಿಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆಯಲ್ಲಿ ಶೇಕಡಾ 20ರಿಂದ 25ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಚಿನ್ನದ ಬೆಲೆ ಇಳಿಕೆಯಿಂದ ಖರೀದಿ ಭರಾಟೆ:
ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಆಗಿರುವ ಗಣನೀಯ ಇಳಿಕೆ ಗ್ರಾಹಕರ ಗಮನ ಸೆಳೆದಿದೆ. ಮದುವೆಗಾಗಿ ಆಭರಣ ಖರೀದಿಸುವವರು ಮಾತ್ರವಲ್ಲದೆ, ಹೂಡಿಕೆಯ ದೃಷ್ಟಿಯಿಂದ ಚಿನ್ನ ಖರೀದಿಸಲು ಬಯಸುವವರೂ ಮಳಿಗೆಗಳತ್ತ ಬರುತ್ತಿದ್ದಾರೆ. ಬೆಲೆ ಇಳಿಕೆಯಿಂದ ತಮ್ಮ ಬಜೆಟ್ನಲ್ಲಿ ಹೆಚ್ಚು ಆಭರಣ ಖರೀದಿಸಲು ಸಾಧ್ಯವಾಗುತ್ತಿದೆ ಎಂಬುದು ಗ್ರಾಹಕರ ಅಭಿಪ್ರಾಯ.
ಕಡಿಮೆ ಬೆಲೆ ನೋಡಿ ಮೋಸ ಹೋಗಬೇಡಿ!
ಚಿನ್ನದ ಖರೀದಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಚಿನ್ನದ ತೂಕ ಹೆಚ್ಚಿಸುವ ಉದ್ದೇಶದಿಂದ ರೀನಿಯಂ, ಇರಿಡಿಯಂನಂತಹ ಇತರ ಲೋಹಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಆಭರಣ ಖರೀದಿಸುವಾಗ ಕೇವಲ ಬೆಲೆಗೆ ಆದ್ಯತೆ ನೀಡದೆ, ಚಿನ್ನದ ಶುದ್ಧತೆ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಗಮನ ನೀಡಬೇಕು. ವಿಶೇಷವಾಗಿ ಹಾಲ್ಮಾರ್ಕ್ ಹಾಗೂ HUID ಕೋಡ್ ಪರಿಶೀಲಿಸುವುದು ಅಗತ್ಯ. ಆಭರಣದ ಮೇಲೆ ನಮೂದಿಸಿರುವ ವಿವರಗಳು ಮತ್ತು ಮಾರಾಟಗಾರರ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಸೋಸಿಯೇಷನ್ ತಿಳಿಸಿದೆ.
ಚಿನ್ನ ಖರೀದಿಸುವಾಗ ಈ ಅಂಶಗಳನ್ನು ಮರೆಯಬೇಡಿ
ಚಿನ್ನದ ಆಭರಣ ಖರೀದಿಸಿದ ಬಳಿಕ ಅಧಿಕೃತ ಬಿಲ್ ಪಡೆಯುವುದನ್ನು ಮರೆಯಬಾರದು. ಬಿಲ್ನಲ್ಲಿ ಚಿನ್ನದ ತೂಕ, ಕ್ಯಾರೆಟ್ ಪ್ರಮಾಣ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. 18 ಕ್ಯಾರೆಟ್ ಅಥವಾ 22 ಕ್ಯಾರೆಟ್ ಚಿನ್ನ ಖರೀದಿಸುತ್ತಿದ್ದರೆ ಅದರ ಶುದ್ಧತೆಯ ವಿವರ ಬಿಲ್ನಲ್ಲಿ ಸ್ಪಷ್ಟವಾಗಿ ನಮೂದಾಗಿರಬೇಕು.
ಅಗತ್ಯವಿದ್ದರೆ ಕ್ಯಾರೆಟ್ ಮೀಟರ್ ಮೂಲಕ ಚಿನ್ನದ ಶುದ್ಧತೆಯನ್ನು ಪರೀಕ್ಷಿಸಿಕೊಳ್ಳಬಹುದು. ಜಿಎಸ್ಟಿ ಪಾವತಿಸಿದರೂ ಅಧಿಕೃತ ಬಿಲ್ ಪಡೆಯುವುದು ಗ್ರಾಹಕರ ಹಕ್ಕು ಮತ್ತು ಸುರಕ್ಷತೆಗೆ ಮುಖ್ಯವಾಗಿದೆ ಎಂದು ಅಸೋಸಿಯೇಷನ್ ಸಲಹೆ ನೀಡಿದೆ.
ಒಟ್ಟಾರೆ, ಚಿನ್ನದ ಬೆಲೆ ಇಳಿಕೆಯಿಂದ ಮದುವೆ ಖರೀದಿದಾರರಿಗೆ ಒಂದಷ್ಟು ನೆಮ್ಮದಿ ಸಿಕ್ಕಿದೆ. ಆದರೆ ಕಡಿಮೆ ಬೆಲೆಯ ಆಕರ್ಷಣೆಗೆ ಒಳಗಾಗಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ, ಹಾಲ್ಮಾರ್ಕ್, HUID ಕೋಡ್, ತೂಕ ಮತ್ತು ಬಿಲ್ ಪರಿಶೀಲಿಸಿದ ನಂತರವೇ ಚಿನ್ನ ಖರೀದಿಸುವುದು ಉತ್ತಮ.