ಅಕ್ಷರ ಗಾತ್ರ

ಬಿಸ್ಲೆರಿ ನೀರು ಕುಡಿಯುವವರೇ ಎಚ್ಚರ! ಪಶ್ಚಿಮ ಬಂಗಾಳದಲ್ಲೂ ಮಾದರಿ ಪರೀಕ್ಷೆಯಲ್ಲಿ ಫೇಲ್!

ಬಿಸ್ಲೆರಿ ನೀರು ಕುಡಿಯುವವರೇ ಎಚ್ಚರ! ಪಶ್ಚಿಮ ಬಂಗಾಳದಲ್ಲೂ ಮಾದರಿ ಪರೀಕ್ಷೆಯಲ್ಲಿ ಫೇಲ್!

ಕೋಲ್ಕತ್ತಾ: ದೇಶದ ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ ಬಿಸ್ಲೆರಿ ಕಂಪನಿಗೆ ಒಂದರ ಹಿಂದೆ ಮತ್ತೊಂದು ಸಂಕಷ್ಟ ಎದುರಾಗುತ್ತಿದೆ.

ಕರ್ನಾಟಕದ ಬಳಿಕ ಇದೀಗ ಪಶ್ಚಿಮ ಬಂಗಾಳದಲ್ಲೂ ಕಂಪನಿಯ ನೀರಿನ ಮಾದರಿ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿದೆ. ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ತೆಲಿಪಾರಾ ಗ್ರಾಮದಲ್ಲಿರುವ ಬಿಸ್ಲೆರಿ ಘಟಕದಿಂದ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷೆಯ ವೇಳೆ ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿದೆ. ಒಳಚರಂಡಿ ನೀರಿನ ಸೋರಿಕೆ ಅಥವಾ ಪೈಪ್‌ಲೈನ್‌ಗಳಲ್ಲಿನ ದೋಷಗಳಿಂದ ಇಂತಹ ಬ್ಯಾಕ್ಟೀರಿಯಾಗಳು ಕುಡಿಯುವ ನೀರನ್ನು ಸೇರಬಹುದು.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‌ಎಸ್‌ಎಸ್‌ಎಐ, ಬಿಸ್ಲೆರಿ ಇಂಟರ್‌ನ್ಯಾಷನಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದೆ. ಈಗಾಗಲೇ 2026ರ ಆಗಸ್ಟ್ 12ರಂದು ಸಂಬಂಧಿತ ಬ್ಯಾಚ್‌ನ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಮುಂದಿನ ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆಗೆ ಹಸಿರು ನಿಶಾನೆ ದೊರೆತಿದೆ.

ಇಷ್ಟೇ ಅಲ್ಲದೆ, ಗೋವಾದ ಬಿಸ್ಲೆರಿ ಘಟಕದ ನೀರಿನ ಮಾದರಿಯೂ ಈ ಹಿಂದೆ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಆದರೆ, ತನ್ನ ಉತ್ಪನ್ನಗಳು ಕುಡಿಯಲು ಸುರಕ್ಷಿತವಾಗಿವೆ ಎಂದು ಬಿಸ್ಲೆರಿ ಕಂಪನಿ ಈ ಹಿಂದೆ ಹೇಳಿಕೊಂಡಿತ್ತು.

ಒಟ್ಟಿನಲ್ಲಿ, ಸತತವಾಗಿ ವಿವಿಧ ರಾಜ್ಯಗಳಲ್ಲಿ ಬಿಸ್ಲೆರಿ ನೀರಿನ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿದ್ದು, ಕಂಪನಿಯ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.