ದೋಹಾ: ಕತಾರ್ ರಾಜಧಾನಿ ದೋಹಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭಾರತ-ಎ ತಂಡದ ಅಭಿಯಾನ ಅಂತ್ಯಗೊಂಡಿದೆ. ನವೆಂಬರ್ 26ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಿಲಕ್ ವರ್ಮಾ ನಾಯಕತ್ವದ ಭಾರತ ತಂಡ ಶ್ರೀಲಂಕಾ-ಎ ವಿರುದ್ಧ 8 ವಿಕೆಟ್ಗಳ ಸೋಲು ಅನುಭವಿಸಿದೆ. ಈ ಮೂಲಕ ಫೈನಲ್ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ-ಎ ತಂಡದ ನಾಯಕ ತಿಲಕ್ ವರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 317 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಆದರೆ ಈ ಗುರಿ ಬೆನ್ನಟ್ಟಿದ ಶ್ರೀಲಂಕಾ-ಎ ತಂಡದ ಬ್ಯಾಟರ್ಗಳು ಭಾರತೀಯ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಕೇವಲ 41.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿದ ಶ್ರೀಲಂಕಾ ತಂಡ ಭರ್ಜರಿ ಗೆಲುವಿನೊಂದಿಗೆ ಫೈನಲ್ಗೆ ಲಗ್ಗೆ ಇಟ್ಟಿತು.
ಬೌಲಿಂಗ್ ವೈಫಲ್ಯಕ್ಕೆ ಬೇಸರ ವ್ಯಕ್ತಪಡಿಸಿದ ತಿಲಕ್ ವರ್ಮಾ
ಪಂದ್ಯದ ಸೋಲಿನ ಬಳಿಕ ಮಾತನಾಡಿದ ಭಾರತ-ಎ ತಂಡದ ನಾಯಕ ತಿಲಕ್ ವರ್ಮಾ, ತಂಡದ ಸೋಲಿಗೆ ಬೌಲಿಂಗ್ ವೈಫಲ್ಯವೇ ಪ್ರಮುಖ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಬೌಲಿಂಗ್ನಲ್ಲಿ ಹಲವು ಪ್ರಯತ್ನಗಳನ್ನು ಮಾಡಿದರೂ ಶ್ರೀಲಂಕಾ ಬ್ಯಾಟರ್ಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಬಳಿಕ ಪ್ರಸಾರಕರೊಂದಿಗೆ ಮಾತನಾಡಿದ ಅವರು, ಮೊದಲ 15 ಓವರ್ಗಳು ಬಹಳ ನಿರ್ಣಾಯಕವಾಗಿದ್ದವು. ಈ ಅವಧಿಯಲ್ಲಿ ಶ್ರೀಲಂಕಾ ತಂಡವನ್ನು ಪ್ರತಿ ಓವರ್ಗೆ ಆರು ರನ್ಗಳಿಗಿಂತ ಕಡಿಮೆ ಗಳಿಸುವಂತೆ ನಿಯಂತ್ರಿಸುವ ಯೋಜನೆ ರೂಪಿಸಲಾಗಿತ್ತು. ಬಳಿಕ ಪಿಚ್ ನಿಧಾನವಾಗಲಿದೆ ಎಂಬ ನಿರೀಕ್ಷೆಯೂ ಇತ್ತು ಎಂದು ಹೇಳಿದ್ದಾರೆ.
ಆದರೆ, ಯೋಜನೆಯನ್ನು ಮೈದಾನದಲ್ಲಿ ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಶ್ರೀಲಂಕಾದ ಆರಂಭಿಕ ಬ್ಯಾಟರ್ಗಳು ಉತ್ತಮವಾಗಿ ಆಡಿದರು. ಅವರನ್ನು ನಿಯಂತ್ರಿಸಲು ಲಭ್ಯವಿದ್ದ ಎಲ್ಲ ಬೌಲರ್ಗಳನ್ನು ಬಳಸಿಕೊಂಡರೂ ಫಲಿತಾಂಶ ಸಿಗಲಿಲ್ಲ. ಬೌಲಿಂಗ್ನಲ್ಲಿ ಯಾರಿಂದಲೂ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ ಎಂದು ತಿಲಕ್ ತಿಳಿಸಿದ್ದಾರೆ.
ಕ್ರಿಕೆಟ್ನಲ್ಲಿ ಇಂತಹ ಕೆಟ್ಟ ದಿನಗಳು ಸಹಜ. ಆದರೂ ಶ್ರೀಲಂಕಾ ಬ್ಯಾಟರ್ಗಳ ಪ್ರದರ್ಶನವನ್ನು ಮೆಚ್ಚಲೇಬೇಕು. ಇಡೀ ಟೂರ್ನಿಯಲ್ಲಿ ಭಾರತ ತಂಡದ ಬ್ಯಾಟಿಂಗ್ ಉತ್ತಮವಾಗಿತ್ತು. ಆದರೆ ಬೌಲಿಂಗ್ನಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಪರಿಶೀಲಿಸಿ, ಡ್ರೆಸ್ಸಿಂಗ್ ರೂಮ್ನಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಲವಾಗಿ ಕಮ್ಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
317 ರನ್ಗಳ ಮೊತ್ತದ ಬಗ್ಗೆ ತಿಲಕ್ ಹೇಳಿದ್ದೇನು?
ಇನ್ನು ಭಾರತ-ಎ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆಯೂ ತಿಲಕ್ ವರ್ಮಾ ಮಾತನಾಡಿದ್ದಾರೆ. ಈ ಪಂದ್ಯದಲ್ಲಿ 320ರಿಂದ 330 ರನ್ ಗಳಿಸುವ ಗುರಿ ಹೊಂದಿದ್ದೆವು. ಮೊದಲ 20 ಓವರ್ಗಳಲ್ಲಿ ಚೆಂಡು ಬ್ಯಾಟ್ಗೆ ಚೆನ್ನಾಗಿ ಬರುತ್ತಿತ್ತು. ಆದರೆ ನಂತರ ಪಿಚ್ ನಿಧಾನವಾಯಿತು. ಕೆಲವು ಎಸೆತಗಳು ಪಿಚ್ನಲ್ಲಿ ನಿಂತು ಬಂದರೆ, ಇನ್ನು ಕೆಲವು ಚೆಂಡುಗಳು ನಿರೀಕ್ಷೆಗಿಂತ ಕಡಿಮೆ ಎತ್ತರದಲ್ಲಿ ಸಾಗುತ್ತಿದ್ದವು ಎಂದು ವಿವರಿಸಿದ್ದಾರೆ.
ಈ ಹಂತದಲ್ಲಿ ಭಾರತ ತಂಡ ಸತತವಾಗಿ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ ಬಳಿಕ ತನುಷ್ ಮತ್ತು ಶಹಬಾಜ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಅವರ ಆಟದ ನೆರವಿನಿಂದ ತಂಡ 317 ರನ್ಗಳ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಪಿಚ್ನ ಪರಿಸ್ಥಿತಿಯನ್ನು ಗಮನಿಸಿದರೆ ಇದು ಉತ್ತಮ ಮೊತ್ತವಾಗಿತ್ತು ಎಂದು ತಿಲಕ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.