ಜೈಪುರ: ಶತ್ರು ರಾಷ್ಟ್ರಗಳ ಡ್ರೋನ್ ದಾಳಿಯನ್ನು ಎದುರಿಸಲು ಭಾರತ ಮತ್ತೊಂದು ಸ್ವದೇಶಿ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಭಾರತದ ಮೊಟ್ಟಮೊದಲ ಸ್ವದೇಶಿ ವಿನ್ಯಾಸದ, ವಾಹನದ ಮೇಲೆ ಅಳವಡಿಸಬಹುದಾದ ಎರಡು ಹಂತದ ಡ್ರೋನ್ ಬೇಟೆಗಾರ ವ್ಯವಸ್ಥೆ ‘ಭಾರ್ಗವಾಸ್ತ್ರ’ (Bhargavastra) ತನ್ನ ಅಭಿವೃದ್ಧಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ನವೆಂಬರ್ 26ರಂದು ಈ ಸ್ವದೇಶಿ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ನವೆಂಬರ್ 20ರಿಂದ 24ರವರೆಗೆ ಇದರ ಆಂತರಿಕ ಅಭಿವೃದ್ಧಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಶತ್ರುಗಳ ಡ್ರೋನ್ಗಳನ್ನು ಪತ್ತೆಹಚ್ಚಿ ಹೊಡೆದುರುಳಿಸುವುದರ ಜೊತೆಗೆ, ಒಂದೇ ಸಮಯದಲ್ಲಿ ಗುಂಪು ಗುಂಪಾಗಿ ದಾಳಿ ಮಾಡುವ ಡ್ರೋನ್ಗಳನ್ನು ಎದುರಿಸುವ ಸಾಮರ್ಥ್ಯವನ್ನೂ ಈ ವ್ಯವಸ್ಥೆ ಹೊಂದಿದೆ.
ಎರಡು ಆವೃತ್ತಿಗಳಲ್ಲಿ ಭಾರ್ಗವಾಸ್ತ್ರ ಅಭಿವೃದ್ಧಿ
ಭಾರ್ಗವಾಸ್ತ್ರವನ್ನು ಎರಡು ವಿಭಿನ್ನ ಆವೃತ್ತಿಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೊದಲ ಆವೃತ್ತಿ ವಾಯು ರಕ್ಷಣಾ ರಾಕೆಟ್ಗಳನ್ನು ಬಳಸಿದರೆ, ಎರಡನೇ ಆವೃತ್ತಿಯಲ್ಲಿ ನಿಖರ ದಾಳಿಗಾಗಿ ಸ್ವಯಂಚಾಲಿತ ಮಾರ್ಗದರ್ಶನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಈ ವ್ಯವಸ್ಥೆಯ ಪತ್ತೆ ಮತ್ತು ಟ್ರ್ಯಾಕಿಂಗ್ ಜಾಲದಲ್ಲಿ ರೇಡಿಯೋ ಫ್ರೀಕ್ವೆನ್ಸಿ ಡಿಟೆಕ್ಟರ್ಗಳು ಹಾಗೂ ರಾಡಾರ್ಗಳು ಪ್ರಮುಖ ಪಾತ್ರ ವಹಿಸಲಿವೆ. ರಾಡಾರ್, ವಿವಿಧ ಸಂವೇದಕಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ನಿಯಂತ್ರಣ ವ್ಯವಸ್ಥೆಯ ನೆರವಿನಿಂದ ಶತ್ರು ಡ್ರೋನ್ಗಳನ್ನು ಪತ್ತೆಹಚ್ಚಿ ಅವುಗಳ ಚಲನವಲನದ ಮೇಲೆ ನಿಗಾ ಇರಿಸಲಿದೆ.
ಡ್ರೋನ್ಗಳನ್ನು ಹೊಡೆದುರುಳಿಸಲು ವಾಯು ರಕ್ಷಣಾ ರಾಕೆಟ್ಗಳು ಹಾಗೂ ಗುರಿಯನ್ನು ನಿಖರವಾಗಿ ತಲುಪುವ ಮಾರ್ಗದರ್ಶಿತ ಸೂಕ್ಷ್ಮ ಕ್ಷಿಪಣಿಗಳನ್ನು ಬಳಸುವ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ.
2027ರ ಮಾರ್ಚ್ ವೇಳೆಗೆ ಸೇನೆಗೆ ಹಸ್ತಾಂತರ ಗುರಿ
‘ಭಾರ್ಗವಾಸ್ತ್ರ’ವನ್ನು ಸೋಲಾರ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. 2027ರ ಮಾರ್ಚ್ ವೇಳೆಗೆ ಈ ವ್ಯವಸ್ಥೆಯನ್ನು ಭಾರತೀಯ ಸೇನೆಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ.
ಆಧುನಿಕ ಯುದ್ಧಗಳಲ್ಲಿ ಡ್ರೋನ್ಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಪತ್ತೆಹಚ್ಚಿ ತಡೆಯುವ ಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ. ಈ ನಿಟ್ಟಿನಲ್ಲಿ ಭಾರ್ಗವಾಸ್ತ್ರದ ಅಭಿವೃದ್ಧಿ ಭಾರತದ ಸ್ವದೇಶಿ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.