ಬೆಂಗಳೂರು: ಸರ್ಕಾರಿ ಜಮೀನು ಒತ್ತುವರಿ ತೆರವು ವಿಚಾರವಾಗಿ ಶುರುವಾದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಹೊರವಲಯದ ಹೊಸಕೋಟೆ ಸಮೀಪದ ಸೋಲೂರಿನಲ್ಲಿ ನಡೆದಿದೆ. ಲೈಸೆನ್ಸ್ ಹೊಂದಿರುವ ಗನ್‌ನಿಂದ ಗುಂಡು ಹಾರಿಸಿ 25 ವರ್ಷದ ಯುವಕನನ್ನು ಹತ್ಯೆ ಮಾಡಲಾಗಿದೆ.
ಮೃತ ಯುವಕನನ್ನು ಲಿಖಿತ್ ಗೌಡ (25) ಎಂದು ಗುರುತಿಸಲಾಗಿದೆ. ರಮೇಶ್ ಎಂಬಾತ ಕೊಲೆ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
10 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಆರೋಪ
ಸೋಲೂರು ಬಳಿ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕಾಗಿ ಮಂಜೂರಾದ ಜಮೀನನ್ನು ಗುರುತು ಮಾಡುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸರ್ಕಾರಿ ಜಮೀನಿನ ಸುಮಾರು 10 ಗುಂಟೆ ಪ್ರದೇಶವನ್ನು ರಮೇಶ್ ಒತ್ತುವರಿ ಮಾಡಿಕೊಂಡಿದ್ದ ಎಂಬ ಆರೋಪ ಕೇಳಿಬಂದಿದೆ.

ಒತ್ತುವರಿ ತೆರವುಗೊಳಿಸುವ ಉದ್ದೇಶದಿಂದ ಸ್ಥಳಕ್ಕೆ ತೆರಳಿದ್ದ ಸಂದರ್ಭದಲ್ಲಿ ರಮೇಶ್ ಮತ್ತು ಲಿಖಿತ್ ಗೌಡ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಉಂಟಾಗಿದೆ ಎನ್ನಲಾಗಿದೆ.
ಲೈಸೆನ್ಸ್ ಗನ್‌ನಿಂದ ಗುಂಡಿನ ದಾಳಿ
ಗಲಾಟೆ ವಿಕೋಪಕ್ಕೆ ತಿರುಗಿದ ವೇಳೆ ರಮೇಶ್ ತನ್ನ ಲೈಸೆನ್ಸ್ ಹೊಂದಿರುವ ಗನ್‌ನಿಂದ ಲಿಖಿತ್ ಗೌಡನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಲಿಖಿತ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕೊಲೆ ಆರೋಪಿಯಾದ ರಮೇಶ್‌ನನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.