ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಜಮೀನು ನೋಡಲು ಹೋದಾಗ ಗ್ರಾಮಸ್ಥರು ಕಳ್ಳರೆಂದು ಭಾವಿಸಿ ಡಿಕೆಶಿಯವರನ್ನೇ ಓಡಿಸಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ಕಳೆದ 15 ದಿನಗಳ ಹಿಂದೆ ನೆಲಮಂಗಲದ ಸೋಂಪುರ ಸಮೀಪದ ಹಳ್ಳಿಯೊಂದಕ್ಕೆ 15 ಎಕರೆ ಜಮೀನು ನೋಡಲು ಡಿ.ಕೆ. ಶಿವಕುಮಾರ್ ಅವರು ಮಧ್ಯರಾತ್ರಿ ತೆರಳಿದ್ದರು. ಈ ವೇಳೆ ಅಪರಿಚಿತರು ಬಂದಿದ್ದಾರೆಂದು ಭಾವಿಸಿದ ಗ್ರಾಮಸ್ಥರು ಅವರನ್ನು ಓಡಿಸಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಎದ್ದೆನೋ ಬಿದ್ದೆನೋ ಎಂಬಂತೆ ಅಲ್ಲಿಂದ ವಾಪಸ್ ಬಂದಿದ್ದರು. ಇದೇನಾ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಪ್ರಶ್ನಿಸಿ ಲೇವಡಿ ಮಾಡಿದ್ದಾರೆ.
ಭ್ರಷ್ಟಾಚಾರದ ದಾಖಲೆಗಳು ಟನ್‌ಗಟ್ಟಲೆ ಇವೆ:
ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, 20 ಗುಂಟೆ ಜಮೀನಿನ ವಿಚಾರವಾಗಿ 50 ಸಾವಿರ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಕಂದಾಯ ನಿರೀಕ್ಷಕರೊಬ್ಬರು ಅಮಾನತುಗೊಂಡಿರುವುದನ್ನು ಪ್ರಸ್ತಾಪಿಸಿದರು.
ಸರ್ಕಾರಿ ಕೆಲಸಗಳಿಗೆ ಹಣ ಪಡೆಯುತ್ತಿರುವ ಪ್ರಕರಣಗಳು ಸಾಕಷ್ಟಿವೆ. ಹಣ ಪಡೆದು ಕೆಲಸ ಮಾಡಿಕೊಡುವುದನ್ನು ಗೌರವಧನ ಎಂದು ಕರೆಯಲು ಸಾಧ್ಯವೇ? ಇದು ಭ್ರಷ್ಟಾಚಾರ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಭ್ರಷ್ಟಾಚಾರದ ದಾಖಲೆಗಳು ಟನ್‌ಗಟ್ಟಲೆ ಇವೆ ಎಂದು ವಾಗ್ದಾಳಿ ನಡೆಸಿದರು.
ಟೊಯೊಟಾ ಕಂಪನಿ ತಂದಿದ್ದು ದೇವೇಗೌಡರು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜಪಾನ್ ಪ್ರವಾಸದ ಬಗ್ಗೆಯೂ ಕುಮಾರಸ್ವಾಮಿ ಟೀಕಿಸಿದರು. ಕರ್ನಾಟಕಕ್ಕೆ ಟೊಯೊಟಾ ಕಂಪನಿಯನ್ನು ಕರೆತಂದಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಂದು ಹೇಳಿದರು.
ಟೊಯೊಟಾ ಕಂಪನಿ ಬೇರೆ ರಾಜ್ಯಗಳಿಗೆ ತೆರಳುವ ಸಾಧ್ಯತೆಯಿದ್ದ ಸಂದರ್ಭದಲ್ಲಿ ದೇವೇಗೌಡರು ಮನವಿ ಮಾಡಿ ಕರ್ನಾಟಕಕ್ಕೆ ಕರೆತಂದಿದ್ದರು. ಆದರೆ, ಕಾಂಗ್ರೆಸ್ ನಾಯಕರು ಆ ಯೋಜನೆಯಿಂದ ಲಾಭ ಮಾಡಿಕೊಂಡರು ಎಂದು ಆರೋಪಿಸಿದರು. ಅಲ್ಲದೆ, ಪ್ರಾಜೆಕ್ಟ್ 4 ಹೂಡಿಕೆಯನ್ನು ಮಹಾರಾಷ್ಟ್ರಕ್ಕೆ ಏಕೆ ಕೊಂಡೊಯ್ಯಲಾಯಿತು ಎಂದು ಪ್ರಶ್ನಿಸಿದರು.
ಆಶಾ ಕಾರ್ಯಕರ್ತೆಯರ ವಿಚಾರದಲ್ಲೂ ತಿರುಗೇಟು:
ಆಶಾ ಕಾರ್ಯಕರ್ತೆಯರ ಬೇಡಿಕೆಗಳ ವಿಚಾರದಲ್ಲಿಯೂ ಡಿ.ಕೆ. ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಕೇಂದ್ರ ಸರ್ಕಾರದ ಮೂಲಕ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಕೊಡಿಸಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನಿಂದ ಏನು ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.
ಈ ಹಿಂದೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ದೆಹಲಿಗೆ ಕರೆಸಿ ಸಂಬಂಧಪಟ್ಟ ಎರಡು ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದೇನಾಗುತ್ತದೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದೀರಿ. ಆದರೆ, ಅದನ್ನು ಈಡೇರಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಕಳೆದ 12 ದಿನಗಳಿಂದ ಆಶಾ ಕಾರ್ಯಕರ್ತೆಯರು ಚಳಿ, ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೇಮಕಾತಿ ಎಂದು ಹೇಳುವ ನೀವು, ನೇಮಕಾತಿ ಸಮಯದಲ್ಲಿ ಏಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದರು.
ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ನೆರವು ನೀಡಲಿ, ಬಳಿಕ ಕೇಂದ್ರ ಸರ್ಕಾರದ ಪಾಲಿನ ಬಗ್ಗೆ ಮಾತನಾಡೋಣ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.