ಮಂಡ್ಯ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಇಂಡುವಾಳು ಗ್ರಾಮದ ಬಳಿ ಜಲ್ಲಿ ತುಂಬಿದ್ದ ಟಿಪ್ಪರ್‌ಗೆ ಮಹೀಂದ್ರಾ ಥಾರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಕೇರಳ ಮೂಲದ ಯುವಕ ಮತ್ತು ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಮೈಸೂರಿನಿಂದ ಬೆಂಗಳೂರಿನತ್ತ ಮೂವರು ಥಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಇಂಡುವಾಳು ಸಮೀಪ ಮುಂದೆ ಸಾಗುತ್ತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಥಾರ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಬಾಸಿಲ್‌ನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಆರ್‌ಟಿಓ ಅಧಿಕಾರಿಗಳೇ ಕಾರಣವೇ?

ಈ ದುರಂತದ ಬಳಿಕ ಹೆದ್ದಾರಿಯಲ್ಲಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಅಪಘಾತಕ್ಕೆ ಆರ್‌ಟಿಓ ಅಧಿಕಾರಿಗಳ ಕಾರ್ಯವೈಖರಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಇಂಡುವಾಳು ಸಮೀಪ ಆರ್‌ಟಿಓ ಅಧಿಕಾರಿಗಳು ಟಿಪ್ಪರ್‌ಗಳನ್ನು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಮೂರು ಟಿಪ್ಪರ್‌ಗಳಲ್ಲಿ ಎರಡು ನಿಂತಿದ್ದರೆ, ಮತ್ತೊಂದು ಟಿಪ್ಪರ್ ನಿಲ್ಲದೆ ಮುಂದೆ ಹೋಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ತಮ್ಮ ವಾಹನದಲ್ಲಿ ಟಿಪ್ಪರ್ ಅನ್ನು ಬೆನ್ನಟ್ಟಿದ್ದಾರೆ ಎನ್ನಲಾಗಿದೆ.
ಮುಂದೆ ಹೋಗಿ ಟಿಪ್ಪರ್‌ಗೆ ಅಡ್ಡಲಾಗಿ ವಾಹನ ನಿಲ್ಲಿಸಲು ಯತ್ನಿಸಿದಾಗ, ಗಾಬರಿಗೊಂಡ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ ಎಂಬ ಆರೋಪವಿದೆ. ಇದರಿಂದ ಹಿಂದೆ ಬರುತ್ತಿದ್ದ ಥಾರ್ ಚಾಲಕನಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಹೆದ್ದಾರಿಯಲ್ಲಿ ವಾಹನಗಳನ್ನು ಬೆನ್ನಟ್ಟಿ ಹಠಾತ್ತಾಗಿ ತಡೆದಿರುವುದು ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕರಿಂದ ಕೇಳಿಬಂದಿದೆ. ಆದರೆ, ಈ ಆರೋಪಗಳ ಬಗ್ಗೆ ಅಧಿಕೃತ ತನಿಖೆಯ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಬೇಕಿದೆ.
ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇಬ್ಬರ ಸಾವಿಗೆ ಕಾರಣವಾದ ಅಪಘಾತದ ಹಿಂದಿನ ನೈಜ ಸಂಗತಿ ಏನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.