ಅಕ್ಷರ ಗಾತ್ರ

ಪತ್ನಿ ವಿರುದ್ಧ 40ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ ಪತಿಯ ನಡೆ ಕ್ರೌರ್ಯ; ವಿಚ್ಛೇದನ ಆದೇಶ ಎತ್ತಿಹಿಡಿದ ಹೈಕೋರ್ಟ್‌!

ಪತ್ನಿ ವಿರುದ್ಧ ಸರಣಿ ಪ್ರಕರಣಗಳನ್ನು ದಾಖಲಿಸಿದ ಪತಿಯ ನಡೆ ಕ್ರೌರ್ಯ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶ ಎತ್ತಿಹಿಡಿದು ಪೀಠ ತೀರ್ಪು ನೀಡಿದೆ.

Karnataka High Court portrait with focus on legal justice in Bengaluru
ವಿಚ್ಛೇದನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಪತ್ನಿ ವಿರುದ್ಧ ಸರಣಿ ಮೊಕದ್ದಮೆ ಹೂಡಿದ ಪತಿ ನಡೆಗೆ ಕರ್ನಾಟಕ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ.

ಬೆಂಗಳೂರು: ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಕಾರಣಕ್ಕೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಸರಣಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಕಾನೂನು ವ್ಯವಸ್ಥೆಯನ್ನು ಸೇಡು ತೀರಿಸಿಕೊಳ್ಳುವ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಪತ್ನಿ ವಿರುದ್ಧ ದ್ವೇಷ ಸಾಧನೆಗಾಗಿ ಅನಗತ್ಯ ಹಾಗೂ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವುದು ಕ್ರೌರ್ಯಕ್ಕೆ ಸಮಾನವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನ ಆದೇಶವನ್ನು ಎತ್ತಿಹಿಡಿದಿದೆ.

ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಎಚ್.ಶಾಂತಿ ಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಪತ್ನಿ ವಿರುದ್ಧ ಸರಣಿ ಪ್ರಕರಣ ದಾಖಲಿಸಿದ್ದು ಕ್ರೌರ್ಯ

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಪತ್ನಿಯ ವಿರುದ್ಧ ಪತಿ ಹೊಂದಿರುವ ತೀವ್ರ ದ್ವೇಷ ಮತ್ತು ಹಗೆತನವನ್ನು ಸರಣಿ ಮೊಕದ್ದಮೆಗಳು ತೋರಿಸುತ್ತವೆ ಎಂದು ಹೇಳಿದೆ. ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುವ ಉದ್ದೇಶದಿಂದ ಪತ್ನಿಯ ಕುಟುಂಬಸ್ಥರ ವಿರುದ್ಧವೂ ಹಲವು ಪ್ರಕರಣಗಳನ್ನು ದಾಖಲಿಸಿರುವುದನ್ನು ನ್ಯಾಯಪೀಠ ಗಮನಿಸಿದೆ.

ನ್ಯಾಯಾಂಗ ಪ್ರಕ್ರಿಯೆಯನ್ನು ಮತ್ತೊಬ್ಬರಿಗೆ ಕಿರುಕುಳ ನೀಡಲು ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ಮುಂದಿನ ದಿನಗಳಲ್ಲಿ ಪತಿಯು ಪತ್ನಿ ಅಥವಾ ಆಕೆಯ ಕುಟುಂಬದ ವಿರುದ್ಧ ಅನಗತ್ಯ ದೂರು ಹಾಗೂ ಪ್ರಕರಣಗಳನ್ನು ದಾಖಲಿಸಿ ಅವರ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನಿರ್ಬಂಧ ವಿಧಿಸಿದೆ.

ಇನ್ನು ವಿಚ್ಛೇದನ ಅರ್ಜಿಯಲ್ಲಿ ಪತ್ನಿ ಮಾಡಿದ್ದ ಆರೋಪಗಳನ್ನು ನಿರಾಕರಿಸಲು ಪತಿ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಪತ್ನಿಯನ್ನು ಪಾಟಿ ಸವಾಲಿಗೂ ಒಳಪಡಿಸಿಲ್ಲ. ಅಮೆರಿಕದಲ್ಲಿ ಮತ್ತೊಬ್ಬ ಶ್ರೀಮಂತ ವ್ಯಕ್ತಿಯನ್ನು ವಿವಾಹವಾಗಲು ಪತ್ನಿ ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿದ್ದರೂ ಅದಕ್ಕೆ ಯಾವುದೇ ಪುರಾವೆ ಸಲ್ಲಿಸಿಲ್ಲ. ಇಂತಹ ಆಧಾರರಹಿತ ಆರೋಪಗಳು ಕೂಡ ಮಾನಸಿಕ ಹಿಂಸೆಗೆ ಸಮಾನವಾಗಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪತ್ನಿ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ಅನಗತ್ಯ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಅವಮಾನ ಹಾಗೂ ಕಿರುಕುಳ ನೀಡಿರುವುದು ಕ್ರೌರ್ಯದ ವ್ಯಾಪ್ತಿಗೆ ಬರುತ್ತದೆ ಎಂಬ ಸುಪ್ರೀಂಕೋರ್ಟ್‌ನ ತೀರ್ಪನ್ನು ಪೀಠ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಹಿಂದೂ ವಿವಾಹ ಕಾಯ್ದೆಯಡಿ ಕ್ರೌರ್ಯದ ಆಧಾರದಲ್ಲಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ಎತ್ತಿಹಿಡಿದಿದೆ.

2014ರಲ್ಲಿ ನಡೆದಿತ್ತು ಮದುವೆ

ಪ್ರಕರಣದ ಹಿನ್ನೆಲೆ ಗಮನಿಸುವುದಾದರೆ, ಬೆಂಗಳೂರಿನ ಕೋಡಿಗೇಹಳ್ಳಿಯ ನಿವಾಸಿಯಾಗಿರುವ ಪತಿ ಹಾಗೂ ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಮಹಾಲಕ್ಷ್ಮೀಪುರಂ ನಿವಾಸಿ ಯುವತಿ 2014ರ ಜೂನ್‌ 16ರಂದು ವಿವಾಹವಾಗಿದ್ದರು.

ಮದುವೆಯಾದ ಸುಮಾರು ಒಂದು ತಿಂಗಳ ಬಳಿಕ ಸಮಾರಂಭವೊಂದರಲ್ಲಿ ಪತಿಯ ವರ್ತನೆ ಅಸಹಜವಾಗಿರುವುದನ್ನು ಪತ್ನಿ ಗಮನಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಪತಿಗೆ ಪ್ಯಾನಿಕ್‌ ಅಟ್ಯಾಕ್‌ ಆಗಿದ್ದು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿತ್ತು. ಅಲ್ಲದೆ, ಪತಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಆದರೆ, ಮದುವೆಗೂ ಮುನ್ನ ಈ ಕುರಿತು ಪತಿಯ ಕುಟುಂಬದವರು ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಪತ್ನಿ ಆರೋಪಿಸಿದ್ದರು.

ವಿವಾಹದ ಬಳಿಕ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯುವ ಉದ್ದೇಶದಿಂದ ಪತ್ನಿ ಪತಿಯೊಂದಿಗೆ ಹಲವು ಬಾರಿ ಅಮೆರಿಕಕ್ಕೆ ಪ್ರಯಾಣಿಸಿದ್ದರು. ಆದರೆ, ಪತಿ ವೈವಾಹಿಕ ಜೀವನ ಮುಂದುವರಿಸಲು ಆಸಕ್ತಿ ತೋರಿಸದೆ, ವೈವಾಹಿಕ ಕರ್ತವ್ಯಗಳನ್ನು ನಿರ್ವಹಿಸಲು ಮುಂದಾಗಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ತನ್ನ ತಂದೆಯ ಮೂಲಕ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

75 ಲಕ್ಷ ರೂ. ಖರ್ಚು ಮಾಡಿದ್ದರೂ ವಿಚ್ಛೇದನಕ್ಕೆ ಮುಂದಾದರು ಎಂದಿದ್ದ ಪತಿ

ವಿಚಾರಣೆ ವೇಳೆ ಪತಿಯ ಪರ ವಕೀಲರು, ತಮ್ಮ ಕಕ್ಷಿದಾರರು ಲಂಡನ್‌ನ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ವ್ಯವಹಾರ ವಿಷಯದಲ್ಲಿ ಎಂಬಿಎ ಪದವಿ ಪಡೆದಿದ್ದು, ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ವಾದಿಸಿದ್ದರು. ಪತ್ನಿಗಾಗಿ ದುಬಾರಿ ಕೈಗಡಿಯಾರ ಖರೀದಿಸುವುದು, ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುವುದು ಹಾಗೂ ಹಲವು ಬಾರಿ ಅಮೆರಿಕಕ್ಕೆ ಪ್ರಯಾಣಿಸುವುದಕ್ಕೆ ಸುಮಾರು 75 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಇಷ್ಟೆಲ್ಲ ಖರ್ಚು ಮಾಡಿದರೂ ಪತ್ನಿ ವಿಚ್ಛೇದನಕ್ಕೆ ಮುಂದಾಗಿರುವುದು ಪತಿಗೆ ಮಾನಸಿಕ ಆಘಾತ ಉಂಟುಮಾಡಿದೆ ಎಂದು ವಾದಿಸಿದ್ದರು.

ವಾದ-ಪ್ರತಿವಾದ ಆಲಿಸಿದ್ದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪತ್ನಿ ಕುಟುಂಬದ ವಿರುದ್ಧ 40ಕ್ಕೂ ಹೆಚ್ಚು ಪ್ರಕರಣಗಳ ದಾಖಲು

ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ ಪತ್ನಿಯ ಪರ ವಕೀಲರು ಗಂಭೀರ ಆರೋಪಗಳನ್ನು ಮಾಡಿದ್ದರು. ಪತಿ ಮತ್ತು ಅವರ ತಂದೆ ಸೇರಿಕೊಂಡು ಪತ್ನಿ, ಆಕೆಯ ತಂದೆ, ಸಹೋದರ ಹಾಗೂ ಪತ್ನಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವಿರುದ್ಧ ಚೆಕ್‌ ಬೌನ್ಸ್‌, ಕಳ್ಳತನದ ದೂರು, ಪಾಸ್‌ಪೋರ್ಟ್‌ ರದ್ದುಪಡಿಸುವಂತೆ ಮನವಿ, ಜಾತಿ ಪ್ರಮಾಣಪತ್ರ ಅಕ್ರಮ ಹಾಗೂ ವೈದ್ಯಕೀಯ ಮಂಡಳಿಗೆ ದೂರು ಸೇರಿದಂತೆ 40ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಈ ಪೈಕಿ ಬಹುತೇಕ ಪ್ರಕರಣಗಳನ್ನು ಹೈಕೋರ್ಟ್‌ ರದ್ದುಗೊಳಿಸಿದ್ದು, ಕೆಲವು ಪ್ರಕರಣಗಳು ವಿಚಾರಣಾ ನ್ಯಾಯಾಲಯದಲ್ಲಿಯೇ ವಜಾಗೊಂಡಿವೆ ಎಂಬ ದಾಖಲೆಗಳನ್ನೂ ಸಲ್ಲಿಸಿದ್ದರು. ವಿಚ್ಛೇದನಕ್ಕೆ ಮುಂದಾದ ಕಾರಣಕ್ಕೆ ಪತ್ನಿ ಮತ್ತು ಆಕೆಯ ಕುಟುಂಬದವರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ವಾದಿಸಿದ್ದರು.

ಎರಡೂ ಕಡೆಯ ವಾದಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್‌, ಪತಿಯ ಮೇಲ್ಮನವಿಯನ್ನು ತಿರಸ್ಕರಿಸಿ ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಆದೇಶವನ್ನು ಎತ್ತಿಹಿಡಿದಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.