ನವದೆಹಲಿ: ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ಬೆಟ್ಟದ ವಿವಾದಿತ ಕಲ್ಲಿನ ಸ್ತಂಭದಲ್ಲಿ ನವೆಂಬರ್ 28ರಂದು ಕಾರ್ತಿಕ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ನವೆಂಬರ್ 20ರಂದು ನೀಡಿದ್ದ ನಿರ್ದೇಶನವನ್ನು ಪಾಲಿಸದ ತಮಿಳುನಾಡು ಸರ್ಕಾರ ಮತ್ತು ಮಧುರೈ ಜಿಲ್ಲಾ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಹಾಲಿ ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ಪೀಠವು ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ ನಿವೃತ್ತ ನ್ಯಾಯಮೂರ್ತಿಗಳಾದ ವೈದ್ಯನಾಥನ್ ಮತ್ತು ಪಾರ್ಥಿಬನ್ ಅವರನ್ನು ರಿಸೀವರ್‌ಗಳಾಗಿ ನೇಮಿಸಿದೆ. ನವೆಂಬರ್ 28ರಂದು ದೀಪತ್ತೂನ್‌ನಲ್ಲಿ ಕಾರ್ತಿಕ ದೀಪ ಬೆಳಗಿಸುವ ಜವಾಬ್ದಾರಿಯನ್ನು ಈ ಇಬ್ಬರು ರಿಸೀವರ್‌ಗಳಿಗೆ ವಹಿಸಲಾಗಿದೆ.
ಭಕ್ತರಿಗೂ ದೀಪ ಬೆಳಗಿಸಲು ಅವಕಾಶ
ನವೆಂಬರ್ 20ರಂದು ನೀಡಿದ್ದ ಆದೇಶದಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ದೀಪ ಬೆಳಗಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದೀಗ ವಿವಾದಿತ ಸ್ಥಳದ ಸಮೀಪದಲ್ಲಿರುವ ದರ್ಗಾದಿಂದ ಎಲ್ಲ ದಿಕ್ಕುಗಳಲ್ಲಿಯೂ ಕನಿಷ್ಠ 50 ಮೀಟರ್ ಅಂತರ ಕಾಯ್ದುಕೊಂಡು ಪ್ರತಿಯೊಬ್ಬ ಭಕ್ತರೂ ದೀಪ ಬೆಳಗಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ದರ್ಗಾಕ್ಕೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ ಅಲ್ಲಿಗೆ ಭೇಟಿ ನೀಡುವ ಭಕ್ತರು ಪ್ರಾರ್ಥನೆ ಸಲ್ಲಿಸಲು ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (CRPF) ನ್ಯಾಯಾಲಯ ಸೂಚಿಸಿದೆ.
ತಮಿಳುನಾಡಿನ ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್
ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರು, ಮಧುರೈ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ ಮತ್ತು ದೇವಸ್ಥಾನದ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಲಾಗಿದೆ.
ದೀಪ ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್ 20ರ ಆದೇಶದ ಬಳಿಕ ಅಧಿಕಾರಿಗಳ ನಡುವೆ ನಡೆದ ಇಮೇಲ್ ಸಂವಹನ, ದೂರವಾಣಿ ಕರೆಗಳು ಹಾಗೂ ಸಂದೇಶಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ನ್ಯಾಯಪೀಠ ಆದೇಶಿಸಿದೆ. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಾಗುವಂತೆಯೂ ಸೂಚಿಸಿದೆ.
ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ
ಪ್ರಕರಣದಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ, ಕಾರ್ಯಾಂಗದ ಅಧಿಕಾರಿಗಳು ತಮ್ಮ ರಾಜಕೀಯ ನಾಯಕರ ಸೂಚನೆಯಂತೆ ನಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಆದೇಶ ಪಾಲಿಸದಿರುವುದು ತಮಿಳುನಾಡು ಆಡಳಿತದಲ್ಲಿ ಅಥವಾ ಕನಿಷ್ಠ ಮಧುರೈ ಜಿಲ್ಲೆಯಲ್ಲಿ ಆಡಳಿತಾತ್ಮಕ ಅರಾಜಕತೆ ಇರುವುದನ್ನು ತೋರಿಸುತ್ತದೆ ಎಂದು ಪೀಠ ಕಿಡಿಕಾರಿದೆ. ಇಂತಹ ಪರಿಸ್ಥಿತಿಯನ್ನು ಉಕ್ಕಿನ ಹಸ್ತದಿಂದ ನಿಯಂತ್ರಿಸದಿದ್ದರೆ ಸಾಂವಿಧಾನಿಕ ಅರಾಜಕತೆ ಉಂಟಾಗಬಹುದು ಎಂದು ಎಚ್ಚರಿಸಿದೆ.
ನ್ಯಾಯಾಲಯದ ಆದೇಶವನ್ನು ಪಾಲಿಸುವುದಿಲ್ಲ ಎಂದು ದೇವಸ್ಥಾನದ ಟ್ರಸ್ಟಿಗಳ ಮಂಡಳಿ ನಿರ್ಣಯ ಕೈಗೊಂಡಿರುವುದನ್ನು ತೀವ್ರವಾಗಿ ಖಂಡಿಸಿದ ನ್ಯಾಯಪೀಠ, ಇದನ್ನು ಉದ್ದೇಶಪೂರ್ವಕ ಹಾಗೂ ಬಹಿರಂಗ ಉಲ್ಲಂಘನೆ ಎಂದು ಬಣ್ಣಿಸಿದೆ.
ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಬದ್ಧರಾಗಿರಬೇಕು
ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಅಧಿಕಾರಿಗಳು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ನ್ಯಾಯಾಲಯದ ಆದೇಶವು ಸಂಧಾನಕ್ಕೆ ಆಹ್ವಾನವಲ್ಲ. ನ್ಯಾಯಾಲಯವೇ ಅದನ್ನು ಮಾರ್ಪಡಿಸುವವರೆಗೂ ಸರ್ಕಾರ, ಅಧಿಕಾರಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಆದೇಶಕ್ಕೆ ಬದ್ಧವಾಗಿರಬೇಕು ಎಂದು ಹೇಳಿದೆ.
ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ನ್ಯಾಯದ ಹಾದಿಗೆ ಅಡ್ಡಿಪಡಿಸುವ ಅಥವಾ ಅದನ್ನು ಕಲುಷಿತಗೊಳಿಸುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂಬ ಖಡಕ್ ಸಂದೇಶವನ್ನು ಸುಪ್ರೀಂ ಕೋರ್ಟ್ ರವಾನಿಸಿದೆ.