ಯಶ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ 23ನೇ ದಿನಕ್ಕೆ ಚಿತ್ರ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದ್ದು, ಭಾರತದಲ್ಲಿ 1,000 ಕೋಟಿ ರೂ. ನಿವ್ವಳ ಗಳಿಕೆ ದಾಟಿದೆ. ವಿಶ್ವಾದ್ಯಂತ ಒಟ್ಟು 1,790.10 ಕೋಟಿ ರೂ. ಗಳಿಸುವ ಮೂಲಕ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಈ ಮೂಲಕ ‘ರಾಮಾಯಣ’ ಚಿತ್ರವು ಎಸ್‌ಎಸ್ ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ಬಾಹುಬಲಿ 2 ಸಿನಿಮಾ ತನ್ನ ಲೈಫ್‌ಟೈಮ್‌ನಲ್ಲಿ ವಿಶ್ವಾದ್ಯಂತ 1,788.06 ಕೋಟಿ ರೂ. ಗಳಿಸಿತ್ತು. ಇದೀಗ ರಾಮಾಯಣ ಈ ಮೊತ್ತವನ್ನು ದಾಟಿ ಹೊಸ ದಾಖಲೆ ನಿರ್ಮಿಸಿದೆ.
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಬಿಡುಗಡೆಯ 23ನೇ ದಿನವಾದ ಶುಕ್ರವಾರ ಚಿತ್ರವು 6,584 ಪ್ರದರ್ಶನಗಳಿಂದ 8.45 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಈವರೆಗೆ ಸುಮಾರು 595 ಕೋಟಿ ರೂ. ಗಳಿಸಿದ್ದು, ವಿಶ್ವಾದ್ಯಂತ ಒಟ್ಟು ಗಳಿಕೆ 1,790.10 ಕೋಟಿ ರೂ.ಗೆ ತಲುಪಿದೆ.
23ನೇ ದಿನದ ಭಾಷಾವಾರು ಗಳಿಕೆಯ ವಿವರ ಗಮನಿಸಿದರೆ, ಹಿಂದಿ ಆವೃತ್ತಿಯು 4,976 ಪ್ರದರ್ಶನಗಳಿಂದ ಸುಮಾರು 5 ಕೋಟಿ ರೂ. ಗಳಿಸಿದೆ. ಕನ್ನಡದಲ್ಲಿ 1.25 ಕೋಟಿ ರೂ., ತಮಿಳಿನಲ್ಲಿ 1.05 ಕೋಟಿ ರೂ., ಮಲಯಾಳಂನಲ್ಲಿ 1 ಕೋಟಿ ರೂ. ಹಾಗೂ ತೆಲುಗಿನಲ್ಲಿ 15 ಲಕ್ಷ ರೂ. ಗಳಿಕೆ ಮಾಡಿದೆ ಎಂದು ವರದಿಯಾಗಿದೆ.

ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಚಿತ್ರ ಬಿಡುಗಡೆಯಾಗಿ ನಾಲ್ಕನೇ ವಾರದತ್ತ ಸಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಇತ್ತೀಚೆಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ, ನಟ ರಣಬೀರ್ ಕಪೂರ್ ಹಾಗೂ ನಟಿ ಸಾಯಿ ಪಲ್ಲವಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ಭರ್ಜರಿ ಗಳಿಕೆ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.