ಅಕ್ಷರ ಗಾತ್ರ

ಮಹಿಳೆಯರ ಹೆಸರನ್ನೇ ಅಳಿಸಲು ತಾಲಿಬಾನ್ ಆದೇಶ? ಆಸ್ಪತ್ರೆ, ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖ!

ಮಹಿಳೆಯರ ಹೆಸರನ್ನೇ ಅಳಿಸಲು ತಾಲಿಬಾನ್ ಆದೇಶ? ಆಸ್ಪತ್ರೆ, ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖ!

ಅಫ್ಘಾನಿಸ್ತಾನ: ಒಬ್ಬ ಮಹಿಳೆಗೆ ತನ್ನದೇ ಆದ ಹೆಸರು ಇರುತ್ತದೆ. ಆದರೆ ಅಫ್ಘಾನಿಸ್ತಾನದಲ್ಲಿ ಈಗ ಆ ಹೆಸರನ್ನೇ ಬಳಸಬಾರದು ಎಂಬ ಆದೇಶ ಹೊರಬಿದ್ದಿದೆ ಎನ್ನಲಾಗಿದೆ.

ಮಹಿಳೆಯರ ಶಿಕ್ಷಣ, ಉದ್ಯೋಗ ಹಾಗೂ ಸಾರ್ವಜನಿಕ ಜೀವನದ ಮೇಲೆ ನಿರ್ಬಂಧ ವಿಧಿಸಿರುವ ತಾಲಿಬಾನ್ ಆಡಳಿತ, ಇದೀಗ ಅವರ ವೈಯಕ್ತಿಕ ಗುರುತಿಗೂ ಕಡಿವಾಣ ಹಾಕಲು ಮುಂದಾಗಿದೆ. ಉತ್ತರ ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದಲ್ಲಿ ಮಹಿಳೆಯರ ನಿಜವಾದ ಹೆಸರುಗಳನ್ನು ಸರ್ಕಾರಿ ದಾಖಲೆಗಳಲ್ಲಿ ಬಳಸುವುದನ್ನು ನಿಷೇಧಿಸಿ, ಬದಲಿಗೆ ‘ಬೀಬಿ’ ಎಂದು ಮಾತ್ರ ನಮೂದಿಸುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಮಜರ್-ಎ-ಷರೀಫ್ ಸೇರಿದಂತೆ ಪ್ರಾಂತ್ಯದ ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್‌ಗಳು, ನ್ಯಾಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಈ ನಿಯಮ ಜಾರಿಯಲ್ಲಿದೆ ಎನ್ನಲಾಗಿದೆ. ಮಹಿಳೆಯರ ವೈದ್ಯಕೀಯ ಚೀಟಿ, ರಕ್ತ ಪರೀಕ್ಷೆಯ ವರದಿ ಹಾಗೂ ಆಸ್ಪತ್ರೆಯ ನೋಂದಣಿ ಪುಸ್ತಕಗಳಲ್ಲೂ ಅವರ ಹೆಸರುಗಳ ಬದಲಿಗೆ ‘ಬೀಬಿ’ ಎಂಬ ಪದವನ್ನೇ ಬಳಸಲಾಗುತ್ತಿದೆ.

ಆದರೆ ಈ ನಿರ್ಧಾರದಿಂದ ಮತ್ತೊಂದು ಗಂಭೀರ ಸಮಸ್ಯೆ ಎದುರಾಗುವ ಆತಂಕವಿದೆ. ಒಂದೇ ಆಸ್ಪತ್ರೆಯಲ್ಲಿ ಹಲವು ಮಹಿಳೆಯರ ಹೆಸರು ‘ಬೀಬಿ’ ಎಂದೇ ದಾಖಲಾಗುವುದರಿಂದ ರೋಗಿಗಳ ಗುರುತು ಪತ್ತೆಹಚ್ಚುವುದು ಕಷ್ಟವಾಗಬಹುದು. ಇದರಿಂದ ಒಬ್ಬರಿಗೆ ನೀಡಬೇಕಾದ ಔಷಧ ಮತ್ತೊಬ್ಬರಿಗೆ ತಲುಪುವ ಅಥವಾ ಪರೀಕ್ಷಾ ವರದಿಗಳು ಬದಲಾಗುವ ಅಪಾಯವಿದೆ ಎಂದು ಆರೋಗ್ಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಈಗಾಗಲೇ ಮಹಿಳೆಯರು ಪುರುಷ ವೈದ್ಯರಿಂದ ಚಿಕಿತ್ಸೆ ಪಡೆಯುವುದಕ್ಕೆ ನಿರ್ಬಂಧಗಳಿರುವ ಹಿನ್ನೆಲೆಯಲ್ಲಿ, ಈ ಹೊಸ ನಿಯಮ ವೈದ್ಯಕೀಯ ಸೇವೆಗಳ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ.

‘ವೇರ್ ಈಸ್ ಮೈ ನೇಮ್?’ ಅಭಿಯಾನದ ಹೋರಾಟಕ್ಕೆ ಹಿನ್ನಡೆ?

ಅಫ್ಘಾನ್ ಸಮಾಜದ ಕೆಲವು ಭಾಗಗಳಲ್ಲಿ ಮಹಿಳೆಯರನ್ನು ಅವರ ಹೆಸರಿನಿಂದ ಗುರುತಿಸುವ ಬದಲು ಯಾರದೋ ಪತ್ನಿ ಅಥವಾ ಮಗಳು ಎಂದು ಕರೆಯುವ ಪದ್ಧತಿ ಇದೆ. ಕೆಲವೆಡೆ ಸಮಾಧಿ ಕಲ್ಲುಗಳ ಮೇಲೂ ಮಹಿಳೆಯರ ಹೆಸರುಗಳನ್ನು ಬರೆಯುವುದಿಲ್ಲ.

ಈ ಪದ್ಧತಿಗೆ ವಿರುದ್ಧವಾಗಿ ಮಹಿಳೆಯರ ಗುರುತಿನ ಹಕ್ಕಿಗಾಗಿ 2017ರಲ್ಲಿ ‘ವೇರ್ ಈಸ್ ಮೈ ನೇಮ್?’ ಎಂಬ ಅಭಿಯಾನ ಆರಂಭವಾಗಿತ್ತು. ಒಸ್ಮಾನಿ ಎಂಬುವವರು ಆರಂಭಿಸಿದ ಈ ಅಭಿಯಾನದ ಪ್ರಮುಖ ಉದ್ದೇಶ ಮಕ್ಕಳ ಜನನ ಪ್ರಮಾಣಪತ್ರಗಳಲ್ಲಿ ತಾಯಂದಿರ ಹೆಸರನ್ನೂ ದಾಖಲಿಸುವುದಾಗಿತ್ತು. ಈ ಹೋರಾಟದ ಮೂಲಕ ಜನನ ಪ್ರಮಾಣಪತ್ರಗಳಲ್ಲಿ ತಾಯಿಯ ಹೆಸರನ್ನು ಸೇರಿಸುವಂತೆ ಒತ್ತಾಯಿಸಲಾಗಿತ್ತು.

ತಾಯಿಯ ಹೆಸರಿಲ್ಲದೆ ಮಕ್ಕಳ ಗುರುತು ಸಾಬೀತುಪಡಿಸಲು ಪರದಾಟ:

ಅಫ್ಘಾನ್ ಪತ್ರಕರ್ತೆ ಖದೀಜಾ ಅಮೀನ್ ಅವರ ಅನುಭವವೂ ಮಹಿಳೆಯರ ಗುರುತಿನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅವರ ಮಾಜಿ ಪತಿ ಮಕ್ಕಳೊಂದಿಗೆ ತೆರಳಿದ ಬಳಿಕ, ಮಕ್ಕಳ ಜನನ ಪ್ರಮಾಣಪತ್ರಗಳಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಯುರೋಪಿಯನ್ ಅಧಿಕಾರಿಗಳ ಮುಂದೆ ಮಕ್ಕಳ ತಾಯಿ ಎಂಬುದನ್ನು ಸಾಬೀತುಪಡಿಸಲು ಅವರು ಪರದಾಡಬೇಕಾಯಿತು. ಈ ಪ್ರಕ್ರಿಯೆ ಪೂರ್ಣಗೊಳ್ಳುವಷ್ಟರಲ್ಲಿ ಅವರ ಮಾಜಿ ಪತಿ ಮಕ್ಕಳೊಂದಿಗೆ ಅಫ್ಘಾನಿಸ್ತಾನಕ್ಕೆ ತೆರಳಿದ್ದರು ಎನ್ನಲಾಗಿದೆ.

ಮೇ ತಿಂಗಳಲ್ಲಿ ಬಾಲ್ಖ್ ಪ್ರಾಂತ್ಯದಲ್ಲಿ ಜಾರಿಗೆ ಬಂದಿರುವ ಈ ಹೊಸ ಆದೇಶ ಮಹಿಳೆಯರ ಅಸ್ತಿತ್ವ ಮತ್ತು ಗುರುತಿನ ಹಕ್ಕಿನ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಮಹಿಳೆಯರ ಹೆಸರುಗಳನ್ನೇ ಅಧಿಕೃತ ದಾಖಲೆಗಳಿಂದ ಕೈಬಿಡುವ ಕ್ರಮದ ವಿರುದ್ಧ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಈ ಬೆಳವಣಿಗೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳು ಯಾವ ಹಂತಕ್ಕೆ ತಲುಪಿವೆ ಎಂಬ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.