ಬೆಂಗಳೂರು: ರಾಜ್ಯದ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2026ರ ನವೆಂಬರ್ 10 ಅಂತಿಮ ಗಡುವಾಗಿದೆ ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಇನ್ನೂ ಲಕ್ಷಾಂತರ ಜನರು ಈ ಪ್ರಕ್ರಿಯೆ ಪೂರ್ಣಗೊಳಿಸದೇ ಇರುವುದರಿಂದ ನಿಗದಿತ ಸಮಯದೊಳಗೆ ಎಲ್ಲರೂ ಕಡ್ಡಾಯವಾಗಿ ಬಯೋಮೆಟ್ರಿಕ್ ದೃಢೀಕರಣ ಮುಗಿಸಬೇಕು ಎಂದು ಇಲಾಖೆ ಸೂಚಿಸಿದೆ.
ರಾಜ್ಯ ಸರ್ಕಾರವು ಅರ್ಹ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ಸೇರಿದಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (PDS) ನಿರಂತರವಾಗಿ ಪಡಿತರ ಧಾನ್ಯ ಪೂರೈಸಲು ಇ-ಕೆವೈಸಿ ಕಡ್ಡಾಯಗೊಳಿಸಿದೆ. ನಕಲಿ ಕಾರ್ಡ್ಗಳ ಹಾವಳಿ ತಡೆಯಲು ಮತ್ತು ಅನರ್ಹರನ್ನು ಪಟ್ಟಿಯಿಂದ ಕೈಬಿಡಲು ಮರು ಇ-ಕೆವೈಸಿ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು.
ರೇಷನ್ ಕಾರ್ಡ್ ಇ-ಕೆವೈಸಿ ಬಾಕಿ ಇರುವವರ ವಿವರ
ಆಹಾರ ಇಲಾಖೆ ನೀಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 2,67,64,276 ಪಡಿತರ ಚೀಟಿ ಫಲಾನುಭವಿಗಳು ಮರು ಇ-ಕೆವೈಸಿ ಮಾಡಿಸಿಕೊಳ್ಳಬೇಕಿತ್ತು. ಈ ಪೈಕಿ ನವೆಂಬರ್ 3ರ ವೇಳೆಗೆ 2,26,30,747 ಮಂದಿ ಯಶಸ್ವಿಯಾಗಿ ಇ-ಕೆವೈಸಿ ಮುಗಿಸಿದ್ದಾರೆ. ಆದರೆ, ಇಂದಿಗೂ ರಾಜ್ಯದಲ್ಲಿ ಬರೋಬ್ಬರಿ 41,33,529 ಫಲಾನುಭವಿಗಳು ಈ ಪ್ರಕ್ರಿಯೆ ಪೂರ್ಣಗೊಳಿಸದೇ ಬಾಕಿ ಉಳಿದಿದ್ದಾರೆ.
ಸರ್ಕಾರವು ಈಗಾಗಲೇ ಈ ಹಿಂದೆ ನಿಗದಿಪಡಿಸಿದ್ದ ಗಡುವನ್ನು ಒಂದು ಬಾರಿ ವಿಸ್ತರಿಸಿತ್ತು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನೀಡಲಾಗಿದ್ದ ಆ ರಿಯಾಯಿತಿ ನವೆಂಬರ್ 10ಕ್ಕೆ ಮುಕ್ತಾಯವಾಗಲಿದೆ. ಈ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಗಡುವನ್ನು ಮತ್ತೆ ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ. ಈ ಕುರಿತು ನವೆಂಬರ್ 10ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತೆ? ಆಹಾರ ಇಲಾಖೆಯಿಂದ ಮಹತ್ವದ ಸೂಚನೆ ವರದಿಯನ್ನು ಓದಬಹುದು.

ಇ-ಕೆವೈಸಿ ಮಾಡಿಸಲು ಇರುವ ಆಯ್ಕೆಗಳು
ಬಾಕಿ ಉಳಿದಿರುವ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಪೂರ್ಣಗೊಳಿಸಲು ಸರ್ಕಾರ ಎರಡು ಸುಲಭ ಮಾರ್ಗಗಳನ್ನು ಒದಗಿಸಿದೆ:
- ಅನ್ನ ಸೇವೆ ಆ್ಯಪ್: ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಸ್ಮಾರ್ಟ್ಫೋನ್ ಮೂಲಕವೇ ದೃಢೀಕರಣಕ್ಕೆ ಅವಕಾಶ ನೀಡಿದೆ. ಫಲಾನುಭವಿಗಳು ಗೂಗಲ್ ಪ್ಲೇಸ್ಟೋರ್ನಿಂದ ‘ಅನ್ನ ಸೇವೆ’ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು, ಆಧಾರ್ ಮುಖ ಚಹರೆ ಗುರುತಿಸುವಿಕೆ (Face RD) ಮೂಲಕ ನಿಮಿಷಗಳಲ್ಲಿ ಪ್ರಕ್ರಿಯೆ ಮುಗಿಸಬಹುದು. ಈ ಕುರಿತ ವಿವರವಾದ ಮಾಹಿತಿಗೆ ರೇಷನ್ ಕಾರ್ಡ್ʼದಾರರಿಗೆ ಮನೆಯಲ್ಲೇ ಇ-ಕೆವೈಸಿ ಮಾಹಿತಿ ಲೇಖನ ಪರಿಶೀಲಿಸಬಹುದು.
- ನ್ಯಾಯಬೆಲೆ ಅಂಗಡಿ ಭೇಟಿ: ಮೊಬೈಲ್ ಆ್ಯಪ್ ಬಳಸಲು ಸಾಧ್ಯವಾಗದವರು ತಮ್ಮ ವ್ಯಾಪ್ತಿಯ ಸ್ಥಳೀಯ ನ್ಯಾಯಬೆಲೆ ಅಂಗಡಿ ಅಥವಾ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ, ‘AHARA’ ತಂತ್ರಾಂಶದಲ್ಲಿ ಬೆರಳಚ್ಚು ಅಥವಾ ಐರಿಸ್ ಸ್ಕ್ಯಾನ್ ಮೂಲಕ ಇ-ಕೆವೈಸಿ ದಾಖಲಿಸಬಹುದು.
ಗಡುವು ಮೀರಿದರೆ ಕಾದಿದೆ ಕಠಿಣ ಕ್ರಮ
ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರ ಹೆಸರಿನ ಎದುರು ಇ-ಕೆವೈಸಿ ದಾಖಲಾಗುವುದು ಕಡ್ಡಾಯವಾಗಿದೆ. ನಿಗದಿತ ನವೆಂಬರ್ 10ರೊಳಗೆ ಪ್ರಕ್ರಿಯೆ ಮುಗಿಸದಿದ್ದರೆ, ಅಂಥವರ ಹೆಸರನ್ನು ಪಡಿತರ ಹಂಚಿಕೆ ಪಟ್ಟಿಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸುವ ಅಥವಾ ರದ್ದುಪಡಿಸುವ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಆದ್ದರಿಂದ ಫಲಾನುಭವಿಗಳು ಕೊನೆ ಕ್ಷಣದ ಸರ್ವರ್ ದಟ್ಟಣೆ ಹಾಗೂ ತಾಂತ್ರಿಕ ತೊಂದರೆ ತಪ್ಪಿಸಲು ತಕ್ಷಣವೇ ಇ-ಕೆವೈಸಿ ಮಾಡಿಸಿಕೊಳ್ಳಲು ಕೋರಲಾಗಿದೆ.