ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರು ಇ-ಕೆವೈಸಿ (e-KYC) ಮಾಡಿಸಿಕೊಳ್ಳಲು ನವೆಂಬರ್ 10 ಕೊನೆಯ ದಿನವಾಗಿದೆ.
ಬಾಕಿ ಉಳಿದಿರುವ ಎಲ್ಲ ಫಲಾನುಭವಿಗಳು ನಿಗದಿತ ಗಡುವಿನೊಳಗೆ ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಒಟ್ಟು 2,67,64,276 ಪಡಿತರ ಚೀಟಿ ಫಲಾನುಭವಿಗಳು ಮರು ಇ-ಕೆವೈಸಿ ಮಾಡಿಸಬೇಕಿತ್ತು. ಈ ಪೈಕಿ ನವೆಂಬರ್ 3ರ ವೇಳೆಗೆ 2,26,30,747 ಫಲಾನುಭವಿಗಳು ಯಶಸ್ವಿಯಾಗಿ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಆದರೆ, ಇನ್ನೂ 41,33,529 ಫಲಾನುಭವಿಗಳು ಪ್ರಕ್ರಿಯೆ ಪೂರ್ಣಗೊಳಿಸುವುದು ಬಾಕಿ ಇದೆ.
ಈಗಾಗಲೇ ಇ-ಕೆವೈಸಿ ಮಾಡಿಸಲು ನೀಡಿದ್ದ ಗಡುವನ್ನು ಒಂದು ಬಾರಿ ವಿಸ್ತರಿಸಲಾಗಿದೆ. ಹೀಗಾಗಿ, ನವೆಂಬರ್ 10ರ ನಂತರ ಯಾವುದೇ ಕಾರಣಕ್ಕೂ ಗಡುವನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಬಾಕಿ ಉಳಿದಿರುವ ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ‘AHARA’ ತಂತ್ರಾಂಶದ ಮೂಲಕ ನವೆಂಬರ್ 10ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಇಲ್ಲವಾದಲ್ಲಿ ಇಲಾಖೆಯ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.