ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಘೋಷಿಸಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಪುರುಷ ಸರ್ಕಾರಿ ನೌಕರರಿಗೆ ಪಿತೃತ್ವ ರಜೆ ಸೌಲಭ್ಯ ಕಲ್ಪಿಸುವ ಹೊಸ ಕ್ರಮ ಜಾರಿಗೆ ಬಂದಿದೆ.
ಹೊಸ ನಿಯಮದ ಪ್ರಕಾರ, ವಿವಾಹಿತ ಪುರುಷ ಸರ್ಕಾರಿ ನೌಕರರು ಮಗುವಿನ ಜನನದ ನಿರೀಕ್ಷಿತ ದಿನಾಂಕಕ್ಕೆ 15 ದಿನಗಳ ಮೊದಲು ಅಥವಾ ಮಗು ಜನಿಸಿದ ಆರು ತಿಂಗಳೊಳಗೆ ಒಟ್ಟು 15 ದಿನಗಳ ರಜೆ ಪಡೆಯಲು ಅವಕಾಶ ನೀಡಲಾಗಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ತಾಯಿ ಮತ್ತು ನವಜಾತ ಶಿಶುವಿನ ಆರೈಕೆಗೆ ತಂದೆಯ ನೆರವು
ಮಗುವಿನ ಜನನದ ಸುತ್ತಮುತ್ತಲಿನ ಸಮಯ ತಾಯಿ ಮತ್ತು ನವಜಾತ ಶಿಶುವಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಅವಧಿಯಲ್ಲಿ ತಾಯಿಗೆ ದೈಹಿಕ ಹಾಗೂ ಭಾವನಾತ್ಮಕ ಬೆಂಬಲ ನೀಡುವುದರ ಜೊತೆಗೆ ಮಗುವಿನ ಆರೈಕೆಯಲ್ಲಿಯೂ ತಂದೆಯ ಪಾತ್ರ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪುರುಷ ಸರ್ಕಾರಿ ನೌಕರರಿಗೆ ಪಿತೃತ್ವ ರಜೆ ಸೌಲಭ್ಯ ಕಲ್ಪಿಸಲಾಗಿದೆ.

ಮಹಿಳಾ ಸರ್ಕಾರಿ ನೌಕರರಿಗೆ ಈಗಾಗಲೇ 365 ದಿನಗಳ ಹೆರಿಗೆ ರಜೆ
ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಈಗಾಗಲೇ 365 ದಿನಗಳ ಹೆರಿಗೆ ರಜೆ ಸೌಲಭ್ಯ ಜಾರಿಯಲ್ಲಿದೆ. ಆದರೆ ಪುರುಷ ಸರ್ಕಾರಿ ನೌಕರರೂ ಪಿತೃತ್ವ ರಜೆ ನೀಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರು.
ಪುರುಷ ನೌಕರರ ಬೇಡಿಕೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ.