ಅಕ್ಷರ ಗಾತ್ರ

ದೀಪಾವಳಿ ಸಂಭ್ರಮದ ನಡುವೆ ದೇವಿರಮ್ಮ ಬೆಟ್ಟದಲ್ಲಿ ದುರಂತ: ಕಂಬಿ ಮುರಿದು 20ಕ್ಕೂ ಹೆಚ್ಚು ಭಕ್ತರಿಗೆ ಗಾಯ!

ದೇವಿರಮ್ಮ ಬೆಟ್ಟ ಹತ್ತಲು ಕಿಕ್ಕಿರಿದು ನೆರೆದಿರುವ ಅಪಾರ ಸಂಖ್ಯೆಯ ಭಕ್ತರು.

ಚಿಕ್ಕಮಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇವಿರಮ್ಮನ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿರುವ ಬೆನ್ನಲ್ಲೇ, ಚಿಕ್ಕಮಗಳೂರಿನ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ಅವಘಡ ಸಂಭವಿಸಿದೆ.

ಭಕ್ತರು ಬೆಟ್ಟ ಏರಲು ಅನುಕೂಲವಾಗುವಂತೆ ಅಳವಡಿಸಿದ್ದ ಕಂಬಿ ಏಕಾಏಕಿ ಮುರಿದುಬಿದ್ದ ಪರಿಣಾಮ, ಓರ್ವ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬೆಟ್ಟದ ತುದಿಗೆ ತೆರಳುತ್ತಿದ್ದ ವೇಳೆ ಕಂಬಿ ಮುರಿದುಬಿದ್ದಿದ್ದು, ಏಕಾಏಕಿ ಸಂಭವಿಸಿದ ಘಟನೆಯಿಂದ ಭಕ್ತರು ಆತಂಕಕ್ಕೊಳಗಾಗಿದ್ದಾರೆ. ಗಾಯಗೊಂಡವರನ್ನು ಸುರಕ್ಷಿತವಾಗಿ ಕೆಳಕ್ಕೆ ಕರೆತರಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಸಿಬ್ಬಂದಿ ಗಾಯಾಳುಗಳನ್ನು ಹೊತ್ತುಕೊಂಡು ಬೆಟ್ಟದಿಂದ ಕೆಳಕ್ಕೆ ತಂದಿದ್ದು, ಬಳಿಕ ಆಂಬ್ಯುಲೆನ್ಸ್ ಮೂಲಕ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕೊನೆಯ ದಿನದ ದರ್ಶನಕ್ಕೆ ಹೆಚ್ಚಿದ ಜನಸಂದಣಿ:

ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಬಿಂಡಿಗ ದೇವಿರಮ್ಮನ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಈ ಬಾರಿ ಭಕ್ತರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದ್ದು, ಸುಮಾರು ಒಂದು ಲಕ್ಷ ಜನರು ಬೆಟ್ಟಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಇಂದು ದರ್ಶನದ ಕೊನೆಯ ದಿನವಾಗಿರುವುದರಿಂದ ನಿನ್ನೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಬೆಟ್ಟದ ಕಡಿದಾದ ಹಾದಿಯಲ್ಲಿ ದೇವಿಯ ದರ್ಶನಕ್ಕಾಗಿ ಭಕ್ತರು ಸಾಗುತ್ತಿರುವ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದೆ.

ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಬ್ಬದ ಸಂಭ್ರಮದ ನಡುವೆ ಸಂಭವಿಸಿದ ಈ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದ್ದು, ಬೆಟ್ಟದಲ್ಲಿ ಭಕ್ತರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.