ಕೊಪ್ಪಳ: ಅಂಜನಾದ್ರಿ ಬೆಟ್ಟದ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಬೆನ್ನಲ್ಲೇ ಹೊಸ ಬೆಳವಣಿಗೆ ನಡೆದಿದೆ. ಗಂಗಾವತಿ ತಾಲೂಕಿನ ಹನುಮನಹಳ್ಳಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ವಿದ್ಯಾದಾಸ್ ಬಾಬಾ ಅವರು ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ, ದೇವಸ್ಥಾನದ ಆಡಳಿತ ಕಚೇರಿ ಸೇರಿದಂತೆ ಎಂಟು ಕಟ್ಟಡಗಳಿಗೆ ಬೀಗ ಹಾಕಿದ್ದಾರೆ.
ದೇವಸ್ಥಾನದ ಗರ್ಭಗುಡಿಯನ್ನು ಹೊರತುಪಡಿಸಿ ಆಡಳಿತ ಕಚೇರಿ, ಉಗ್ರಾಣ ಕೊಠಡಿ, ಸಂಸ್ಕೃತ ಪಾಠಶಾಲೆ, ಅಡುಗೆ ಕೋಣೆ ಸೇರಿದಂತೆ ಒಟ್ಟು ಎಂಟು ಕಟ್ಟಡಗಳಿಗೆ ಬೀಗ ಹಾಕಲಾಗಿದೆ. ಅಲ್ಲದೆ, ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಯನ್ನು ಬೆಟ್ಟದಿಂದ ಕೆಳಗಿಳಿಸಲಾಗಿದ್ದು, ಮತ್ತೆ ಪ್ರವೇಶಿಸಲು ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯಿಂದ ದೇವಸ್ಥಾನದ ಆಡಳಿತಾತ್ಮಕ ಚಟುವಟಿಕೆಗಳಿಗೆ ಅಡಚಣೆಯಾಗುವ ಸಾಧ್ಯತೆಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡುವ ಸಾಧ್ಯತೆಯೂ ಇದೆ.
ಅಂಜನಾದ್ರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಹಾಗೂ ಆಡಳಿತಾಧಿಕಾರಿ ನೇಮಕದ ಆದೇಶಗಳನ್ನು ಅಕ್ಟೋಬರ್ 9ರಂದು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿತ್ತು. ಸಂಬಂಧಪಟ್ಟವರಿಗೆ ಸೂಕ್ತ ನೋಟಿಸ್ ನೀಡದೆ ಹಾಗೂ ಅವರ ವಾದವನ್ನು ಆಲಿಸದೆ ಕ್ರಮ ಕೈಗೊಂಡಿರುವುದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

2018ರ ಸೆಪ್ಟೆಂಬರ್ 24ರಂದು ಸರ್ಕಾರ ಹೊರಡಿಸಿದ್ದ ಆದೇಶ ಮತ್ತು ಡಿಸೆಂಬರ್ 15ರಂದು ಆಡಳಿತಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಿದ್ದ ಆದೇಶಗಳನ್ನು ನ್ಯಾಯಾಲಯ ರದ್ದುಪಡಿಸಿತ್ತು. ಇದೇ ವೇಳೆ ವಿದ್ಯಾದಾಸ್ ಬಾಬಾ ಅವರಿಗೆ ಹಿಂದಿನ ನ್ಯಾಯಾಲಯದ ಆದೇಶಗಳ ಅನ್ವಯ ಪೂಜೆ ಮತ್ತು ಅರ್ಚಕ ಕರ್ತವ್ಯ ನಿರ್ವಹಿಸಲು ಅವಕಾಶವಿರುವುದನ್ನೂ ಸ್ಪಷ್ಟಪಡಿಸಿತ್ತು.
ಆದರೆ, ಈ ತೀರ್ಪು ದೇವಸ್ಥಾನದ ಆಡಳಿತದ ಮೇಲೆ ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ ಎಂಬ ಅಂತಿಮ ನಿರ್ಧಾರವಲ್ಲ. ಅಗತ್ಯವಿದ್ದರೆ ಕಾನೂನು ಪ್ರಕ್ರಿಯೆ ಅನುಸರಿಸಿ ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಬಹುದು ಎಂದು ಹೈಕೋರ್ಟ್ ತಿಳಿಸಿತ್ತು.
ಇದೀಗ ನ್ಯಾಯಾಲಯದ ತೀರ್ಪಿನ ನಂತರ ವಿದ್ಯಾದಾಸ್ ಬಾಬಾ ಅವರು ದೇವಸ್ಥಾನದ ಕಟ್ಟಡಗಳಿಗೆ ಬೀಗ ಹಾಕಿರುವುದು ಅಂಜನಾದ್ರಿ ಆಡಳಿತದ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ.