ಅಕ್ಷರ ಗಾತ್ರ

ಶಿವಮೊಗ್ಗ ದಸರಾ ಆನೆ ಸೋಮಣ್ಣ ರಂಪಾಟ ಪ್ರಕರಣ: ಅಧಿಕಾರಿಗಳಿಗೆ ಕ್ಲೀನ್‌ಚಿಟ್!

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಆನೆ ಸೋಮಣ್ಣ ಮತ್ತು ಅಂಬಾರಿ ಬಿದ್ದಿರುವ ದೃಶ್ಯ.

ಶಿವಮೊಗ್ಗ: ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ರಂಪಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ.

ಘಟನೆಯ ಕುರಿತು ಆಂತರಿಕ ತನಿಖೆ ನಡೆಸಿರುವ ಸಿಸಿಎಫ್ ಹನುಮಂತಪ್ಪ ನೇತೃತ್ವದ ತಂಡ, ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಸೋಮಣ್ಣ ಆನೆಯ ಆಯ್ಕೆ ಹೇಗೆ ನಡೆದಿತ್ತು?

ಅಂಬಾರಿ ಹೊರಲು ಸೋಮಣ್ಣ ಆನೆಯನ್ನು ಆಯ್ಕೆ ಮಾಡುವ ಮೊದಲು ಪಶುವೈದ್ಯರು, ಮಾವುತರು ಹಾಗೂ ಅನುಭವ ಹೊಂದಿರುವ ನಿವೃತ್ತ ಜಮೇದಾರ್ ಸೇರಿದಂತೆ ಅಧಿಕಾರಿಗಳ ತಂಡ ಚರ್ಚೆ ನಡೆಸಿತ್ತು. ಈ ಪ್ರಕ್ರಿಯೆಯಲ್ಲಿಯೂ ಯಾವುದೇ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆನೆಗಳಿಗೆ ನೀಡಲಾಗಿತ್ತು ವಿಶೇಷ ತಾಲೀಮು

ಸರ್ಕಾರದ ಅನುಮತಿ ದೊರೆತ ಮರುದಿನದಿಂದಲೇ ಆನೆಗಳಿಗೆ ತರಬೇತಿ ಆರಂಭಿಸಲಾಗಿತ್ತು. ಪ್ರತಿದಿನ ಸುಮಾರು ನಾಲ್ಕು ಕಿಲೋಮೀಟರ್ ದೂರ ನಡೆಸಿ ತಾಲೀಮು ನೀಡಲಾಗುತ್ತಿತ್ತು. ಪೌಷ್ಟಿಕ ಆಹಾರವನ್ನೂ ಒದಗಿಸಲಾಗಿತ್ತು.

ದಸರಾ ಮೆರವಣಿಗೆಯಲ್ಲಿ ಸಾಮಾನ್ಯವಾಗಿ ಎದುರಾಗುವ ಪಟಾಕಿಗಳ ಸದ್ದು, ಜನಸಂದಣಿ ಮತ್ತು ವಾಹನಗಳ ಶಬ್ದಕ್ಕೆ ಆನೆಗಳು ಹೊಂದಿಕೊಳ್ಳುವಂತೆ ತರಬೇತಿ ನೀಡಲಾಗಿತ್ತು. ಮೆರವಣಿಗೆಯ ಮಾರ್ಗದಲ್ಲಿಯೇ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗಿತ್ತು ಎಂದು ತನಿಖಾ ವರದಿ ವಿವರಿಸಿದೆ.

ಅಧಿಕಾರಿಗಳ ನಿರ್ಲಕ್ಷ್ಯವಿಲ್ಲ ಎಂದ ತನಿಖಾ ತಂಡ

ಮೂರು ಆನೆಗಳಿಗೂ ಸಮಾನವಾಗಿ ತರಬೇತಿ ನೀಡಲಾಗಿತ್ತು. ಆದರೂ ಮೆರವಣಿಗೆಯ ಸಂದರ್ಭದಲ್ಲಿ ಸೋಮಣ್ಣ ಆನೆ ರಂಪಾಟ ನಡೆಸಿದ ಘಟನೆ ಸಂಭವಿಸಿದೆ. ಈ ಘಟನೆಗೆ ಆನೆಯ ವರ್ತನೆಯೇ ಕಾರಣವಾಗಿರಬಹುದು ಎಂಬ ಅಭಿಪ್ರಾಯವನ್ನು ಆಂತರಿಕ ತನಿಖೆಯಲ್ಲಿ ವ್ಯಕ್ತಪಡಿಸಲಾಗಿದೆ.

ಒಟ್ಟಿನಲ್ಲಿ, ಆನೆಯ ಆಯ್ಕೆ, ತರಬೇತಿ ಹಾಗೂ ಸಿದ್ಧತಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ಸಿಸಿಎಫ್ ಹನುಮಂತಪ್ಪ ನೇತೃತ್ವದ ತಂಡ ವರದಿ ಸಲ್ಲಿಸಿದೆ. ಈ ಮೂಲಕ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧದ ನಿರ್ಲಕ್ಷ್ಯದ ಆರೋಪಕ್ಕೆ ತನಿಖಾ ವರದಿಯಲ್ಲಿ ಸಮರ್ಥನೆ ದೊರೆತಿಲ್ಲ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.