ಅಕ್ಷರ ಗಾತ್ರ

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಿಷೇಧ; ನ.11ರವರೆಗೆ ಜಿಲ್ಲಾಧಿಕಾರಿಯಿಂದ ಮಹತ್ವದ ಆದೇಶ!

ಮಹದೇಶ್ವರ ಬೆಟ್ಟದ ದೇವಾಲಯದ ಆವರಣದಲ್ಲಿ ರಥೋತ್ಸವದ ವೇಳೆ ಸೇರಿರುವ ಭಕ್ತರ ಜನಸಾಗರ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ದೀಪಾವಳಿ ಜಾತ್ರೆಗೆ ಪಾದಯಾತ್ರೆ ಮೂಲಕ ತೆರಳಲು ಸಿದ್ಧತೆ ನಡೆಸಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಕಾಲ್ನಡಿಗೆ ಹಾಗೂ ಪಾದಯಾತ್ರೆಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ನಿಷೇಧಿಸಿದೆ.

ದೀಪಾವಳಿ ಜಾತ್ರೆಯ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವೇಳೆ ಅರಣ್ಯ ಮಾರ್ಗದಲ್ಲಿ ಕಾಡುಪ್ರಾಣಿಗಳ ದಾಳಿ ಸಂಭವಿಸುವ ಆತಂಕವಿದೆ. ಹೀಗಾಗಿ ನವೆಂಬರ್ 11ರವರೆಗೆ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಸಂಜೆ 6ರಿಂದ ಬೆಳಗ್ಗೆ 7ರವರೆಗೆ ಪಾದಯಾತ್ರೆ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರೂಪ ಆದೇಶಿಸಿದ್ದಾರೆ.

ಈ ನಿರ್ಧಾರದ ಹಿಂದೆ ಆತಂಕಕಾರಿ ಘಟನೆಗಳೂ ಇವೆ. ಕಳೆದ ಬಾರಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಮಂಡ್ಯ ಮೂಲದ ಭಕ್ತರೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಚನ್ನಪಟ್ಟಣ ಮೂಲದ ಬಾಲಕನಿಗೂ ಚಿರತೆ ದಾಳಿಯಿಂದ ಗಾಯವಾಗಿತ್ತು. ಅಷ್ಟೇ ಅಲ್ಲ, ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುತ್ತಿದ್ದ ಬಾಲಕನನ್ನು ಚಿರತೆ ಕೊಂದು ಹಾಕಿದ ಘಟನೆ ಕೂಡ ನಡೆದಿತ್ತು.

ಈ ಸರಣಿ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಈ ಬಾರಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ. ದೀಪಾವಳಿ ಜಾತ್ರೆಗೆ ಭಕ್ತರ ಸುರಕ್ಷಿತ ಸಂಚಾರ ಖಚಿತಪಡಿಸುವ ಉದ್ದೇಶದಿಂದ ರಾತ್ರಿ ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ.

ಹೀಗಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರು ಸಮಯದ ನಿರ್ಬಂಧವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.