ಗದಗ: ಜಿಲ್ಲೆಯ ವಿವಿಧ ಆಹಾರ ಘಟಕಗಳು, ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳ ಮೇಲೆ ಕರ್ನಾಟಕ ರಾಜ್ಯ ಆಹಾರ ಆಯೋಗದ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ವೇಳೆ ಖಾರದ ಪುಡಿ ತಯಾರಿಕಾ ಘಟಕದಲ್ಲಿ ಕೃತಕ ಬಣ್ಣ ಬಳಕೆ, ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಲೋಪ ಹಾಗೂ ಪಡಿತರ ಅಕ್ಕಿ ಅಕ್ರಮ ಸಾಗಾಟದ ಕುರಿತು ಗಂಭೀರ ವಿಚಾರಗಳು ಬೆಳಕಿಗೆ ಬಂದಿವೆ.
ಮೊದಲಿಗೆ ಗದಗದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕಲ್ಯಾಣಿ ಟ್ರೇಡಿಂಗ್ ಕಂಪನಿಯ ಖಾರದ ಪುಡಿ ತಯಾರಿಕಾ ಘಟಕಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಖಾರದ ಪುಡಿಗೆ ಕೃತಕ ಬಣ್ಣ ಬೆರೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ, ಕಳಪೆ ಗುಣಮಟ್ಟದ ಮೆಣಸಿನಕಾಯಿ, ಎಣ್ಣೆ ಹಾಗೂ ಉಪ್ಪನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ.
ಘಟಕದಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದೂ ಪತ್ತೆಯಾಗಿದೆ. ಉತ್ಪಾದನೆ ಮತ್ತು ಅವಧಿ ಮುಗಿಯುವ ದಿನಾಂಕದ ಲೇಬಲ್‌ಗಳಿಲ್ಲದೆ ಪುಡಿ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಲಾಗಿತ್ತು. ಕಾರ್ಮಿಕರಿಗೆ ಮಾಸ್ಕ್, ಹ್ಯಾಟ್ ಹಾಗೂ ಹ್ಯಾಂಡ್ ಗ್ಲೌಸ್‌ಗಳನ್ನು ಒದಗಿಸಿರಲಿಲ್ಲ. ಹೀಗಾಗಿ ವಿವಿಧ ಮಾದರಿಯ ಪುಡಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿರುವ ಅಧಿಕಾರಿಗಳು, ವರದಿ ಬರುವವರೆಗೆ ಫ್ಯಾಕ್ಟರಿ ಬಂದ್ ಮಾಡುವಂತೆ ಸೂಚಿಸಿದ್ದಾರೆ. ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆಯೂ ಆದೇಶಿಸಿದ್ದಾರೆ.
ಇನ್ನು ಗಂಗಿಮಡಿ ಕಾಲೋನಿಯ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಹಾಗೂ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದ ತಂಡ, ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿದೆ. ಈ ವೇಳೆ ಕಳೆದ ಮೂರು ದಿನಗಳಿಂದ ಮೊಟ್ಟೆ ನೀಡಿಲ್ಲ, ಅನ್ನ ಸರಿಯಾಗಿ ಬೆಂದಿರುವುದಿಲ್ಲ, ಕೇವಲ ಬಾಳೆಹಣ್ಣು ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಊಟದ ಗುಣಮಟ್ಟ ಸರಿಯಿಲ್ಲದ ಕಾರಣ ಹಲವು ಮಕ್ಕಳು ಮನೆಯಿಂದಲೇ ಊಟದ ಡಬ್ಬಿ ತರುತ್ತಿರುವುದು ಕಂಡುಬಂದಿದೆ.
ಶಾಲೆಯ ನೀರಿನ ಘಟಕ ದುರಸ್ತಿಯಾಗದೆ ಇರುವುದು, ಶೌಚಾಲಯಗಳ ಅಸ್ವಚ್ಛತೆ ಹಾಗೂ ಸುತ್ತಮುತ್ತಲಿನ ಸ್ವಚ್ಛತೆಯ ಕೊರತೆಯೂ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇನ್ನು ತರಕಾರಿ ಖರೀದಿ ಬಿಲ್‌ಗಳಿಲ್ಲದಿರುವುದು, ರಸೀದಿಗಳಲ್ಲಿ ತಿದ್ದುಪಡಿ ಹಾಗೂ ಖಾಲಿ ಚೆಕ್‌ಗಳಿಗೆ ಮುಂಚಿತವಾಗಿಯೇ ಸಹಿ ಮಾಡಿರುವುದನ್ನು ಕಂಡು ಆಯೋಗದ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಉರ್ದು ಶಾಲೆಯ ಮುಖ್ಯಶಿಕ್ಷಕಿಗೆ ತಕ್ಷಣ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ.
ಇದೇ ವೇಳೆ ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿ ಕಳ್ಳಸಾಗಣೆಯಾಗುತ್ತಿರುವ ಬಗ್ಗೆಯೂ ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಕುರಿತು ವರದಿ ನೀಡುವಂತೆ ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಅವರಿಗೆ ಸೂಚಿಸಿದ್ದಾರೆ. ಅಕ್ರಮದಲ್ಲಿ ಅಧಿಕಾರಿಗಳೇ ಭಾಗಿಯಾಗಿದ್ದರೆ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೆ ಗದಗ-ಬೆಟಗೇರಿ ಅವಳಿ ನಗರದ ನ್ಯಾಯಬೆಲೆ ಅಂಗಡಿಗಳು, ಆಹಾರ ಧಾನ್ಯಗಳ ಸಗಟು ಮಳಿಗೆಗಳು, ಅಂಗನವಾಡಿ ಕೇಂದ್ರಗಳು, ಆಸ್ಪತ್ರೆಗಳು ಹಾಗೂ ವಿವಿಧ ಹಾಸ್ಟೆಲ್‌ಗಳಿಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಈ ದಿಢೀರ್ ತಪಾಸಣೆ ಮುಂದುವರಿಯಲಿದೆ.