ಮಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರುತನಿಖೆ ಪ್ರಕ್ರಿಯೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವೈದ್ಯರನ್ನು ಒಳಗೊಂಡ ಮೆಡಿಕಲ್ ಬೋರ್ಡ್ ಅನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.
ಬೆಂಗಳೂರು, ಹಾವೇರಿ ಮತ್ತು ಬೆಳಗಾವಿ ಜಿಲ್ಲಾ ಎಫ್‌ಎಸ್‌ಎಲ್ ಘಟಕಗಳ ಮೂವರು ವೈದ್ಯರು ಈ ಮೆಡಿಕಲ್ ಬೋರ್ಡ್‌ನಲ್ಲಿ ಇರಲಿದ್ದಾರೆ. ತಂಡದಲ್ಲಿ ಓರ್ವ ಮಹಿಳಾ ವೈದ್ಯೆ ಹಾಗೂ ಇಬ್ಬರು ಪುರುಷ ವೈದ್ಯರು ಸೇರಿದ್ದಾರೆ.
ಮೆಡಿಕಲ್ ಬೋರ್ಡ್ ರಚಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರು ವೈದ್ಯರ ತಂಡವನ್ನು ರಚಿಸಿದ್ದಾರೆ.
ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮರುಸೃಷ್ಟಿ

ಇತ್ತೀಚೆಗೆ ಎಸ್‌ಐಟಿ ಅಧಿಕಾರಿಗಳು ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಮಣ್ಣಸಂಕದ ಕಾಡಿಗೆ ಭೇಟಿ ನೀಡಿದ್ದರು. ಸುಮಾರು 14 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಘಟನೆಯ ಮರುಸೃಷ್ಟಿ ನಡೆಸಲಾಗಿತ್ತು.
ಎಸ್‌ಐಟಿ ತನಿಖಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಎಫ್‌ಎಸ್‌ಎಲ್ ಸಿಬ್ಬಂದಿಯೂ ಭಾಗವಹಿಸಿದ್ದರು. ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ನಿಖರ ಸ್ಥಳವನ್ನು ಕುಟುಂಬಸ್ಥರು ಅಧಿಕಾರಿಗಳಿಗೆ ತೋರಿಸಿದ್ದರು.
ಸುಪ್ರೀಂಕೋರ್ಟ್ ಆದೇಶದಂತೆ ಮುಂದುವರಿದ ತನಿಖೆ
ಸುಪ್ರೀಂಕೋರ್ಟ್ ಸೂಚನೆಯಂತೆ ಮೆಡಿಕಲ್ ಬೋರ್ಡ್ ರಚಿಸಿರುವ ಎಸ್‌ಐಟಿ, ಪ್ರಕರಣಕ್ಕೆ ಸಂಬಂಧಿಸಿದ ವಿಧಿವಿಜ್ಞಾನ ಅಂಶಗಳ ಪರಿಶೀಲನೆಗೆ ಮುಂದಾಗಿದೆ. ಮರುಸೃಷ್ಟಿ ಪ್ರಕ್ರಿಯೆ ಹಾಗೂ ವೈದ್ಯಕೀಯ ತಂಡದ ಪರಿಶೀಲನೆಯಿಂದ ತನಿಖೆಗೆ ಯಾವ ರೀತಿಯ ಮಾಹಿತಿ ಲಭ್ಯವಾಗಲಿದೆ ಎಂಬುದು ಮುಂದಿನ ಬೆಳವಣಿಗೆಯಲ್ಲಿ ತಿಳಿಯಬೇಕಿದೆ.