ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರಲು ಮತ್ತು ಅವರನ್ನು ರಾಜಕೀಯವಾಗಿ ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ನಡೆದಿರುವ ಬಹುಚರ್ಚಿತ ‘ಸ್ಟಿಂಗ್ ಆಪರೇಷನ್’ ಹಿಂದೆ ಕಾಂಗ್ರೆಸ್ ಪಕ್ಷದವರೇ ಭಾಗಿಯಾಗಿದ್ದಾರೆ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ತೇಜೋವಧೆಗೆ ಸ್ವಪಕ್ಷೀಯರ ಕೀಳು ತಂತ್ರ: ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಳೆದ 40 ವರ್ಷಗಳಿಂದ ತಂದೆಯವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸ್ವಚ್ಛ ರಾಜಕಾರಣ ಮಾಡಿದ್ದಾರೆ. ಆದರೆ ಅವರ ತೇಜೋವಧೆ ಮಾಡಿ, ರಾಜಕೀಯ ವರ್ಚಸ್ಸನ್ನು ಧೂಳೀಪಟ ಮಾಡಲು ಯತ್ನಿಸಲಾಗುತ್ತಿದೆ.
ಚುನಾವಣಾ ಟಿಕೆಟ್ ಪಡೆಯಲು ತಂದೆಯವರನ್ನು ಬ್ಲ್ಯಾಕ್‌ಮೇಲ್ ಮಾಡುವ ಕೀಳು ಮಟ್ಟದ ತಂತ್ರ ಇದಾಗಿದೆ. ಅತ್ಯಂತ ನೋವಿನ ವಿಷಯವೆಂದರೆ, ಈ ಕುತಂತ್ರದ ಹಿಂದೆ ನಮ್ಮ ಪಕ್ಷದವರೇ (ಕಾಂಗ್ರೆಸ್) ಇರುವುದು. ಇದರಿಂದ ತಂದೆಯವರು ತೀವ್ರ ಮನನೊಂದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತನ ವಶ, ಕಠಿಣ ಕ್ರಮಕ್ಕೆ ಸಿದ್ದರಾಮಯ್ಯ ಸೂಚನೆ: ಪ್ರಕರಣದ ತನಿಖೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ ಅವರಿಗೂ ಸಂಪೂರ್ಣ ಮಾಹಿತಿ ತಲುಪಿದೆ. ಈ ಷಡ್ಯಂತ್ರದಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರೂ ಹಾಗೂ ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ಬಂಧಿಸುವಂತೆ ಸಿದ್ದರಾಮಯ್ಯ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವ ಎಚ್ಚರಿಕೆ: “ಸತ್ಯ ನಮ್ಮ ಕಡೆ ಇದೆ. ಯಾವ ಸತ್ಯವೂ ಹೆಚ್ಚು ಕಾಲ ಅಡಗಿರುವುದಿಲ್ಲ, ಅಂತಿಮವಾಗಿ ಹೊರಬಂದೇ ಬರುತ್ತದೆ. ಪ್ರಸ್ತುತ ನಡೆಯುತ್ತಿರುವ ಪೊಲೀಸ್ ತನಿಖೆಯ ಮೇಲೆ ನಮಗೆ ನಂಬಿಕೆ ಇದೆ. ಒಂದು ವೇಳೆ ಈ ತನಿಖೆ ಸರಿಯಾದ ದಾರಿಯಲ್ಲಿ ಸಾಗದಿದ್ದರೆ, ಉನ್ನತ ಮಟ್ಟದ ತನಿಖೆ ನಡೆಸುವಂತೆ ಖಂಡಿತವಾಗಿಯೂ ಒತ್ತಾಯಿಸುತ್ತೇವೆ” ಎಂದು ಡಾ. ಯತೀಂದ್ರ ಎಚ್ಚರಿಕೆ ನೀಡಿದ್ದಾರೆ.