ಶಿವಮೊಗ್ಗ: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಶಿವಮೊಗ್ಗ ಹೊರವಲಯದ ಹರಿಗೆ ಗ್ರಾಮದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ.
ಯುವತಿಯರ ಮೇಲೆ ಪಟಾಕಿ ಎಸೆದು, ಮನೆಗೆ ರಾಕೆಟ್ ಪಟಾಕಿ ಬಿಟ್ಟ ಆರೋಪದ ಮೇಲೆ ಪುಡಿರೌಡಿ ನಿರಂಜನ್ ಅಲಿಯಾಸ್ ಶಕೆ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿ ನಿರಂಜನ್ ಯುವತಿಯರ ಮೇಲೆ ಪಟಾಕಿ ಎಸೆದಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ರಘು ಎಂಬುವವರ ಮನೆಗೆ ರಾಕೆಟ್ ಪಟಾಕಿ ಬಿಟ್ಟಿದ್ದು, ಅದು ಪಕ್ಕದ ಮನೆಯ ಮಹಿಳೆಗೆ ತಗುಲಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಪಟಾಕಿ ಸಿಡಿಸಬೇಡಿ ಎಂದು ಬುದ್ಧಿವಾದ ಹೇಳಿದವರೊಂದಿಗೂ ಆರೋಪಿ ಗಲಾಟೆ ನಡೆಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ, ಮೂರು ದಿನಗಳಲ್ಲಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಎಂಟು ಮಂದಿ ವಿರುದ್ಧ ಪ್ರಕರಣ ದಾಖಲು:
ಈ ಘಟನೆಗೆ ಸಂಬಂಧಿಸಿದಂತೆ ನಿರಂಜನ್, ರಿತು ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ನಿರಂಜನ್ ಕಳೆದ ನಾಲ್ಕು ವರ್ಷಗಳಿಂದ ರೌಡಿಶೀಟರ್ ಆಗಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಗಡಿಪಾರು ಆದೇಶವಿದ್ದರೂ ಆರೋಪಿ ಹರಿಗೆ ಗ್ರಾಮದ ಬೀದಿಗೆ ಬಂದು ಯುವತಿಯರ ಮೇಲೆ ಪಟಾಕಿ ಎಸೆದಿದ್ದಾನೆ ಎಂಬುದು ಸ್ಥಳೀಯರ ಆರೋಪವಾಗಿದೆ. ಈ ಕುರಿತು ದೂರು ನೀಡಲು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದಾಗ ದೂರು ಸ್ವೀಕರಿಸದೆ ಎಸ್‌ಪಿ ಕಚೇರಿಗೆ ಹೋಗುವಂತೆ ಸೂಚಿಸಿ ವಾಪಸ್ ಕಳುಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪುಡಿರೌಡಿ ಗಡಿಪಾರಿಗೆ ಗ್ರಾಮಸ್ಥರ ಆಗ್ರಹ:
ಆರೋಪಿಯ ಪುಂಡಾಟಿಕೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ನಿರಂಜನ್‌ನನ್ನು ಕೂಡಲೇ ಗಡಿಪಾರು ಮಾಡಬೇಕು ಹಾಗೂ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಎಸ್‌ಪಿ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಹಬ್ಬದ ಸಂಭ್ರಮದ ನಡುವೆ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.