ಅಕ್ಷರ ಗಾತ್ರ

Breaking News: ಮದುವೆಯಾಗಿ 9 ತಿಂಗಳಲ್ಲೇ ದುರಂತ ಅಂತ್ಯ; 3 ತಿಂಗಳ ಗರ್ಭಿಣಿ ನಿಗೂಢ ಸಾ*ವು!

ಹಸಿರು ಬಣ್ಣದ ಉಡುಪಿನಲ್ಲಿರುವ ಗರ್ಭಿಣಿ Pratibha ಕಪಾಟಿನ ಮುಂದೆ ನಿಂತಿರುವುದು.

ಚಿಕ್ಕಬಳ್ಳಾಪುರ: ಮದುವೆಯಾಗಿ ಕೇವಲ ಒಂಬತ್ತು ತಿಂಗಳಷ್ಟೇ ಕಳೆದಿತ್ತು. ಇನ್ನೇನು ಕೆಲವೇ ತಿಂಗಳಲ್ಲಿ ಮನೆಗೆ ಮಗುವಿನ ಆಗಮನವಾಗಬೇಕಿತ್ತು. ಆದರೆ ಮೂರು ತಿಂಗಳ ಗರ್ಭಿಣಿಯಾಗಿದ್ದ 24 ವರ್ಷದ ಮಹಿಳೆ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಬೆಂಗಳೂರಿನ ಕೆ.ಆರ್.ಪುರಂ ತಾಲೂಕಿನ ಬಿದರಹಳ್ಳಿ ಗ್ರಾಮದ ಪ್ರತಿಭಾ (24) ಎಂದು ಗುರುತಿಸಲಾಗಿದೆ. ಪ್ರತಿಭಾ ಅವರ ಸಾವು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಗಂಡನ ಮನೆಯವರ ಕಿರುಕುಳವೇ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

2026ರ ಜನವರಿ 29ರಂದು ಚಿಂತಾಮಣಿಯ ಸುವರ್ಣ ಕಲ್ಯಾಣ ಮಂಟಪದಲ್ಲಿ ನಾಯನಹಳ್ಳಿ ಗ್ರಾಮದ ಬಚ್ಚನ್ನಗಾರಿ ಕೃಷ್ಣಾರೆಡ್ಡಿ ಅವರ ಪುತ್ರ ರಘು ಎಂಬುವವರೊಂದಿಗೆ ಪ್ರತಿಭಾ ಅವರ ವಿವಾಹ ನೆರವೇರಿತ್ತು. ಪದವೀಧರೆಯಾಗಿದ್ದ ಪ್ರತಿಭಾ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೇವಲ ಒಂಬತ್ತು ತಿಂಗಳಾಗುವಷ್ಟರಲ್ಲೇ ಅವರ ಬದುಕು ದುರಂತ ಅಂತ್ಯ ಕಂಡಿದೆ.

ಊಟಕ್ಕೂ ಸರಿಯಾಗಿ ನೀಡುತ್ತಿರಲಿಲ್ಲವೇ?

ಪ್ರತಿಭಾ ಸಾವಿನ ಬಳಿಕ ಪೋಷಕರು ಗಂಡನ ಮನೆಯವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗಂಡನ ಮನೆಯಲ್ಲಿನ ವ್ಯವಹಾರಗಳ ಬಗ್ಗೆ ತಮ್ಮ ಮಗಳಿಗೆ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ. ಸರಿಯಾಗಿ ಊಟವನ್ನೂ ನೀಡದೆ, ದಿನಕ್ಕೆ ಒಮ್ಮೆ ಮಾತ್ರ ಅಡುಗೆ ಮಾಡಿಸುತ್ತಿದ್ದರು. ಅಲ್ಲದೆ, ಕೊಳೆತ ಆಹಾರ ಪದಾರ್ಥಗಳು ಹಾಗೂ ತರಕಾರಿಗಳನ್ನು ಬಳಸುವಂತೆ ಒತ್ತಾಯಿಸುತ್ತಿದ್ದರು ಎಂದು ಪ್ರತಿಭಾ ತಮ್ಮ ಬಳಿ ಸುಮಾರು ಒಂದು ತಿಂಗಳ ಹಿಂದೆ ಹೇಳಿಕೊಂಡಿದ್ದಳು ಎಂದು ತಂದೆ ಕೃಷ್ಣಮೂರ್ತಿ ಆರೋಪಿಸಿದ್ದಾರೆ.

ಆಗ ಸಣ್ಣಪುಟ್ಟ ಕೌಟುಂಬಿಕ ವಿಚಾರವೆಂದು ಭಾವಿಸಿ, ಅವರೇ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂದು ಸುಮ್ಮನಾಗಿದ್ದೆವು. ಆದರೆ ಇದೀಗ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದಾಳೆ, ಬೇಗ ಬನ್ನಿ ಎಂದಿದ್ದರಂತೆ!

ಇನ್ನು ಪ್ರತಿಭಾ ಗಂಭೀರ ಸ್ಥಿತಿಯಲ್ಲಿದ್ದಾಳೆ, ಕೂಡಲೇ ಬನ್ನಿ ಎಂದು ಗಂಡನ ಮನೆಯವರು ದೂರವಾಣಿ ಕರೆ ಮಾಡಿದ್ದರು ಎಂದು ಪ್ರತಿಭಾ ಅವರ ಸಹೋದರ ಪವನ್ ತಿಳಿಸಿದ್ದಾರೆ. ಈ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ತಾಯಿ ಕೋಮಲ ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಾ ಅವರ ಪತಿ ರಘು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ತಹಶೀಲ್ದಾರ್ ಸುದರ್ಶನ ಯಾದವ್ ಅವರ ಮೇಲ್ವಿಚಾರಣೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಡಿವೈಎಸ್ಪಿ ರಘು, ತಹಶೀಲ್ದಾರ್ ಸುದರ್ಶನ ಯಾದವ್ ಹಾಗೂ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಶಿವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮದುವೆಯಾಗಿ ಕೇವಲ ಒಂಬತ್ತು ತಿಂಗಳಾಗಿದ್ದು, ಮೂರು ತಿಂಗಳ ಗರ್ಭಿಣಿಯಾಗಿದ್ದ ಪ್ರತಿಭಾ ಅವರ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಸಾವಿಗೆ ನಿಖರ ಕಾರಣವೇನು? ಪೋಷಕರು ಮಾಡಿರುವ ಕಿರುಕುಳದ ಆರೋಪಗಳಲ್ಲಿ ಸತ್ಯಾಸತ್ಯತೆ ಏನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

 

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.