ನೆಲಮಂಗಲ: ರೈತನ ಭೂಮಿ ಸರ್ವೆ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಲೈಸನ್ಸ್ ಸರ್ವೆಯರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನೆಲಮಂಗಲ ತಾಲೂಕು ಕಚೇರಿಯಲ್ಲಿ ನಡೆದ ಈ ಕಾರ್ಯಾಚರಣೆ ಸ್ಥಳೀಯವಾಗಿ ಗಮನ ಸೆಳೆದಿದೆ.
ಭೂಮಿ ಸರ್ವೆ ಮಾಡಿಸಿಕೊಳ್ಳಲು ಬಂದಿದ್ದ ರೈತರೊಬ್ಬರ ಬಳಿ ಸರ್ವೆಯರ್ ಮಹೇಶ್ ಗೌಡ ₹20 ಸಾವಿರ ಕೇಳಿದ್ದರು ಎನ್ನಲಾಗಿದೆ. ರೈತರಿಂದ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅವರನ್ನು ರೆಡ್‌ಹ್ಯಾಂಡಾಗಿ ಹಿಡಿದಿದ್ದಾರೆ ಎಂದು ವರದಿಯಾಗಿದೆ.
ಮೂರು ಕಾರುಗಳಲ್ಲಿ ಹತ್ತುಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿಗೆ ಆಗಮಿಸಿದ್ದು, ಸರ್ವೆ ವಿಭಾಗದಲ್ಲಿ ಪರಿಶೀಲನೆ ಮುಂದುವರಿಸಿದ್ದಾರೆ. ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಸೇರಿದಂತೆ ಅಗತ್ಯ ತನಿಖಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸರ್ಕಾರಿ ಕಚೇರಿಯಲ್ಲಿ ನಡೆದ ಈ ಕಾರ್ಯಾಚರಣೆಯ ಕುರಿತು ಲೋಕಾಯುಕ್ತ ಅಧಿಕಾರಿಗಳ ಅಧಿಕೃತ ಹೇಳಿಕೆ ಹಾಗೂ ತನಿಖೆಯ ಮುಂದಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.