ಅಕ್ಷರ ಗಾತ್ರ

ವಿವಾದಕ್ಕೆ ತೆರೆ.. ಆತ್ಮೀಯ ಅಪ್ಪುಗೆ! ಹಾಸನಾಂಬೆ ಸನ್ನಿಧಿಯಲ್ಲಿ ಒಂದಾದ ಇಬ್ಬರು ಮಹಿಳಾ ಅಧಿಕಾರಿಗಳು

ಹಾಸನಾಂಬೆ ದೇವಾಲಯದಲ್ಲಿ ಡಿಸಿ ಲತಾ ಕುಮಾರಿ ಮತ್ತು ಎಸ್‌ಪಿ ಶುಭನ್ವಿತಾ ಮಂಗಳಾರತಿ ಪಡೆಯುತ್ತಿರುವುದು.

ಹಾಸನ: ಇತ್ತೀಚೆಗೆ ಪರಸ್ಪರ ಭಿನ್ನಾಭಿಪ್ರಾಯದ ಕಾರಣದಿಂದ ಸುದ್ದಿಯಾಗಿದ್ದ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಇದೀಗ ಹಾಸನಾಂಬೆ ದೇವಾಲಯದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಇಬ್ಬರೂ ಅಧಿಕಾರಿಗಳು ಪರಸ್ಪರ ಹಸ್ತಲಾಘವ ಮಾಡಿ, ಆತ್ಮೀಯವಾಗಿ ಆಲಿಂಗಿಸಿಕೊಂಡಿರುವುದು ಅವರ ನಡುವಿನ ಮುನಿಸು ಶಮನಗೊಂಡಿರುವ ಸೂಚನೆ ನೀಡಿದೆ.

ಹಾಸನಾಂಬೆ ಸನ್ನಿಧಿಯಲ್ಲಿ ಒಟ್ಟಿಗೆ ಪೂಜೆ

ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಎಸ್‌ಪಿ ಶುಭನ್ವಿತಾ ಒಟ್ಟಿಗೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದರ್ಶನೋತ್ಸವದ ಸಿದ್ಧತೆಗಳು, ಭಕ್ತರಿಗೆ ಕಲ್ಪಿಸಿರುವ ವ್ಯವಸ್ಥೆಗಳು ಹಾಗೂ ಉತ್ಸವದ ಕುರಿತು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಎಸ್‌ಪಿಗೆ ಮಾಹಿತಿ ನೀಡಿದರು.

ಪೂಜೆಯ ವೇಳೆ ಮಂಗಳಾರತಿ ತಟ್ಟೆಗೆ ಕಾಣಿಕೆ ಸಲ್ಲಿಸಲು ಜಿಲ್ಲಾಧಿಕಾರಿಗೆ ಎಸ್‌ಪಿ ಶುಭನ್ವಿತಾ ಹಣ ನೀಡಿದ ಪ್ರಸಂಗವೂ ಗಮನ ಸೆಳೆಯಿತು.

ಹಸ್ತಲಾಘವದ ಬಳಿಕ ಆತ್ಮೀಯ ಆಲಿಂಗನ!

ದೇವಾಲಯದ ಆವರಣದಲ್ಲಿ ಇಬ್ಬರೂ ಅಧಿಕಾರಿಗಳು ಪರಸ್ಪರ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದರು. ಬಳಿಕ ಆತ್ಮೀಯವಾಗಿ ಆಲಿಂಗಿಸಿಕೊಂಡರು. ಇತ್ತೀಚಿನ ವಿವಾದದ ಹಿನ್ನೆಲೆಯಲ್ಲಿ ಈ ಸೌಹಾರ್ದದ ಕ್ಷಣಗಳು ವಿಶೇಷ ಗಮನ ಸೆಳೆದಿವೆ.

ಡಿಸಿ–ಎಸ್‌ಪಿ ಮುನಿಸಿಗೆ ತೆರೆ?

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡುವಿನ ಭಿನ್ನಾಭಿಪ್ರಾಯದ ವಿಚಾರ ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿತ್ತು. ಮುಖ್ಯ ಕಾರ್ಯದರ್ಶಿಯವರೊಂದಿಗೆ ನಡೆದ ಸಭೆಯ ಬಳಿಕ ಇಬ್ಬರ ನಡುವಿನ ಮುನಿಸು ಶಮನಗೊಂಡಿದೆ ಎನ್ನಲಾಗಿದೆ.

ಇದೀಗ ಹಾಸನಾಂಬೆ ದರ್ಶನೋತ್ಸವದ ಸಂದರ್ಭದಲ್ಲಿ ಇಬ್ಬರೂ ಅಧಿಕಾರಿಗಳು ಒಟ್ಟಾಗಿ ಕಾಣಿಸಿಕೊಂಡಿರುವುದು ಆಡಳಿತಾತ್ಮಕ ಸಮನ್ವಯದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದರ್ಶನೋತ್ಸವದ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಸುಗಮವಾಗಿ ನಿರ್ವಹಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

 

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.