ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಅಭಿಮಾನಿಗಳು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕೊಪ್ಪಳದ ಈ ರೈತ ಮಾತ್ರ ತಮ್ಮ ಅಭಿಮಾನವನ್ನು ವಿಭಿನ್ನವಾಗಿಯೇ ತೋರಿಸಿದ್ದಾರೆ. ತಮ್ಮ ಒಂದು ಎಕರೆ ಜಮೀನಿನಲ್ಲಿ ಚೆಂಡು ಹೂವುಗಳನ್ನು ಬೆಳೆಸಿ, ಇಡೀ ಹೊಲದಲ್ಲಿ ‘MODI’ ಎಂಬ ಹೆಸರು ಮೂಡುವಂತೆ ಮಾಡಿದ್ದಾರೆ. ಇದೀಗ ಈ ರೈತನ ವಿನೂತನ ಕೃಷಿ ಪ್ರಯೋಗದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಹೌದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಕ್ಕಳ ಗ್ರಾಮದ ಬಸವರಾಜ ಜಾಲಿಹಾಳ ಎಂಬ ರೈತ ಈ ವಿಶೇಷ ಪ್ರಯೋಗ ಮಾಡಿದ್ದಾರೆ. ತಮ್ಮ ಒಂದು ಎಕರೆ ಜಮೀನಿನಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಚೆಂಡು ಹೂವಿನ ಸಸಿಗಳನ್ನು ಬೆಳೆಸಿರುವ ಅವರು, ಸಸಿಗಳನ್ನು ನೆಡುವ ಹಂತದಲ್ಲೇ ವಿಶೇಷ ಯೋಜನೆ ರೂಪಿಸಿದ್ದರು. ಹೊಲದಲ್ಲಿ ಹೂವಿನ ಗಿಡಗಳನ್ನು ನಿರ್ದಿಷ್ಟ ವಿನ್ಯಾಸದಲ್ಲಿ ನೆಟ್ಟು, ಅವು ಬೆಳೆದು ಹೂವು ಅರಳಿದಾಗ ‘ಮೋದಿ’ ಎಂಬ ಹೆಸರು ಮೂಡುವಂತೆ ಮಾಡಿದ್ದಾರೆ.
ಇದೀಗ ಹೊಲದಲ್ಲಿನ ಗಿಡಗಳು ಬೆಳೆದು ಹೂವುಗಳು ಸಂಪೂರ್ಣವಾಗಿ ಅರಳಿವೆ. ನೆಲದಿಂದ ನೋಡಿದಾಗ ಸಾಮಾನ್ಯ ಹೂವಿನ ತೋಟದಂತೆ ಕಾಣುವ ಈ ಜಮೀನು, ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಾಗ ವಿಶೇಷವಾಗಿ ಗಮನ ಸೆಳೆಯುತ್ತದೆ. ಆಕಾಶದಿಂದ ನೋಡಿದಾಗ ಹಸಿರು ತೋಟದ ಮಧ್ಯೆ ಕೆಂಪು ಮತ್ತು ಹಳದಿ ಹೂವುಗಳಿಂದ ಮೂಡಿರುವ ‘MODI’ ಎಂಬ ಹೆಸರು ಸ್ಪಷ್ಟವಾಗಿ ಗೋಚರಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನವನ್ನು ಕೃಷಿಯ ಮೂಲಕವೇ ವಿಭಿನ್ನವಾಗಿ ವ್ಯಕ್ತಪಡಿಸಿರುವ ಬಸವರಾಜ ಅವರ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ, ಕೃಷಿಯಲ್ಲೂ ಸೃಜನಶೀಲತೆಗೆ ಅವಕಾಶವಿದೆ ಎಂಬುದನ್ನು ಈ ರೈತ ತಮ್ಮ ವಿಭಿನ್ನ ಪ್ರಯೋಗದ ಮೂಲಕ ತೋರಿಸಿಕೊಟ್ಟಿದ್ದಾರೆ.
