ತುಮಕೂರು: ಒಂದೇ ಒಂದು ಬೀಡಿ ಕೇಳಿದ ವಿಚಾರಕ್ಕೆ ಶುರುವಾದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಎಂಟು ದಿನಗಳ ಕಾರ್ಯಾಚರಣೆಯ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಶಿವರಾಜ್ ಎಂದು ಗುರುತಿಸಲಾಗಿದೆ. ಚಿಕ್ಕನಾಯಕನಹಳ್ಳಿ ಪಟ್ಟಣದ ಬಜಾರ್ ರಸ್ತೆಯ ಅಂಗಡಿಯೊಂದರ ಹಿಂಭಾಗದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಶಿವರಾಜ್‌ನ ಮೃತದೇಹ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಬಂಧಿತ ಆರೋಪಿಯನ್ನು ಕಾರವಾರ ಮೂಲದ ದಾದಾಪೀರ್ (24) ಎಂದು ಗುರುತಿಸಲಾಗಿದೆ. ವೈರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಆತ, ಚಿಕ್ಕನಾಯಕನಹಳ್ಳಿಯ ಬನಶಂಕರಿ ಪ್ರದೇಶದಲ್ಲಿ ವಾಸವಿದ್ದ ಎನ್ನಲಾಗಿದೆ.

ಬೀಡಿ ಕೇಳಿದ್ದೇ ಜಗಳಕ್ಕೆ ಕಾರಣ?
ಪೊಲೀಸರ ತನಿಖೆಯ ಪ್ರಕಾರ, ಅಕ್ಟೋಬರ್ 13ರ ರಾತ್ರಿ ಶಿವರಾಜ್ ಮತ್ತು ದಾದಾಪೀರ್ ಪ್ರತ್ಯೇಕವಾಗಿ ಮದ್ಯಪಾನ ಮಾಡಿದ್ದರು. ಈ ವೇಳೆ ಬಜಾರ್ ರಸ್ತೆಯ ಅಂಗಡಿಯೊಂದರ ಬಳಿ ಕುಳಿತಿದ್ದ ಶಿವರಾಜ್, ಅಲ್ಲಿಂದ ನಡೆದು ಹೋಗುತ್ತಿದ್ದ ದಾದಾಪೀರ್‌ನನ್ನು ಕರೆದು ಬೀಡಿ ಕೇಳಿದ್ದಾನೆ.
ಬೀಡಿ ನೀಡುವ ಸಂದರ್ಭದಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಶಿವರಾಜ್, ದಾದಾಪೀರ್‌ನ ತಾಯಿಯ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ದಾದಾಪೀರ್, ಅಲ್ಲಿದ್ದ ಬಂಡೆಕಲ್ಲಿನಿಂದ ಶಿವರಾಜ್‌ನ ತಲೆಗೆ ಹೊಡೆದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿಯ ಪತ್ತೆ
ಪ್ರಕರಣದ ಆರಂಭದಲ್ಲಿ ಆರೋಪಿಯ ಸುಳಿವು ಸಿಗದೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಘಟನೆಯ ಬಳಿಕ ಆರೋಪಿ ನಡೆದು ಹೋಗಿರುವ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ.
ಈ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ದಾದಾಪೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೀಡಿ ಕೇಳಿದ ವಿಚಾರ ಮತ್ತು ಅವಾಚ್ಯ ನಿಂದನೆಯೇ ಕೊಲೆಗೆ ಕಾರಣವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ದ್ವೇಷವಿತ್ತೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.