ಹಾಸನ: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ವಿವಾದದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ತೀವ್ರಗೊಂಡಿದೆ. 2028ರ ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕುಮಾರಸ್ವಾಮಿ, “ಇನ್ನೊಂದು ಮುಖವನ್ನು ಆಗ ತೋರಿಸುತ್ತೇನೆ” ಎಂದು ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ, ಅವರಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಯಾವತ್ತೋ ಮುಗಿದುಹೋಗುತ್ತಿತ್ತು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ರಾಜಕೀಯವಾಗಿ ದೊಡ್ಡ ಹೋರಾಟ ನಡೆಸಿದ್ದೇನೆ ಎಂದ ಅವರು, ಇದೀಗ ಅವರನ್ನು ರಾಜಕೀಯವಾಗಿ ಮುಗಿಸಲು ಏನೆಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂಬ ಪ್ರಶ್ನೆ ಎತ್ತಿದ್ದಾರೆ.
ಯಾವಾಗಲೂ ಅಧಿಕಾರದಲ್ಲಿ ನೀವೇ ಇರುತ್ತೀರಾ? ಇನ್ನೊಂದು ವರ್ಷ ಕಳೆಯಲಿ, ಆಗ ಏನಾಗುತ್ತದೆ ಎಂಬುದು ಗೊತ್ತಾಗಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಹಾಸನಾಂಬೆ ದೇವಾಲಯದ ಬಾಗಿಲು ಶೀಘ್ರದಲ್ಲೇ ತೆರೆಯಲಿದ್ದು, ದೇವಾಲಯದಲ್ಲಿ ಕುಳಿತು ಮಾತನಾಡುವುದಾಗಿ ತಿಳಿಸಿದ ಅವರು, ಸಿದ್ದರಾಮಯ್ಯ ಈ ವಿಚಾರದಲ್ಲಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಅದನ್ನು ತಾನೇ ಮಾಡಿರುವುದಾಗಿ ಸಂಬಂಧಪಟ್ಟ ವ್ಯಕ್ತಿಯೇ ಹೇಳಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ತನಿಖೆ ನಡೆಸಲು ಇನ್ನೇನು ದಾಖಲೆ ಬೇಕು ಎಂದು ಪ್ರಶ್ನಿಸಿರುವ ಅವರು, ಪಕ್ಷದ ಕಾರ್ಯಕರ್ತೆಯೊಬ್ಬರನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಅವರ ಹೆಸರು ಹೇಳುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಕುರಿತು ಕಾರ್ಯಕರ್ತೆಯನ್ನು ಪ್ರಶ್ನಿಸಿರುವ ರೀತಿಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಆ ವ್ಯಕ್ತಿಯನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಹಲವು ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಆಪರೇಷನ್ ಕೂಡ ನಡೆದಿದೆ ಎಂದು ಆರೋಪಿಸಿದ್ದಾರೆ. ಹಲವು ನಾಯಕರ ಸ್ಟಿಂಗ್ ಆಪರೇಷನ್ ನಡೆದಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ರಾಜಣ್ಣ ಹೇಳಿರುವುದನ್ನು ಉಲ್ಲೇಖಿಸಿದ ಅವರು, ಈ ವಿಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಹಿರಿಯ ಶಾಸಕರ ಬಾಯಿ ಮುಚ್ಚಿಸಲಾಗಿದೆ ಎಂದು ದೂರಿದ್ದಾರೆ. ಮಾಜಿ ಪ್ರಧಾನಿಯೊಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿರುವುದನ್ನೂ ಆಕ್ಷೇಪಿಸಿ, ಕಾಂಗ್ರೆಸ್ ಸರ್ಕಾರದ ನಡೆ ಎಲ್ಲಿಗೆ ಸಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವರ ನಡೆ ಗಮನಿಸಿದರೆ ಇದರ ಹಿಂದೆ ಹುನ್ನಾರ ನಡೆದಿರುವ ಅನುಮಾನ ಮೂಡುತ್ತಿದೆ ಎಂದಿರುವ ಕುಮಾರಸ್ವಾಮಿ, ತಮ್ಮನ್ನು ಪ್ರಚೋದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮನ್ನು ‘ಉತ್ತರ ಕುಮಾರ’ ಎಂದು ಟೀಕಿಸಿರುವುದಕ್ಕೂ ಪ್ರತಿಕ್ರಿಯಿಸಿದ ಅವರು, KPSC ಹಗರಣದ ಕುರಿತು ತಮ್ಮ ಬಳಿ ಮಾಹಿತಿ ಇದ್ದರೂ ಅದನ್ನು ಎಲ್ಲಿ ಎಂದು ಪ್ರಶ್ನಿಸಲಾಗುತ್ತಿದೆ. ಆದರೆ, ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಬಳಿ ಉತ್ತರವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ತಿರುಗೇಟು
ಕುಮಾರಸ್ವಾಮಿ ಆರೋಪಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ತಿರುಗೇಟು ನೀಡಿದ್ದಾರೆ. ತಾನು ಯಾರಿಂದಲೂ ನಿರ್ದೇಶನ ಪಡೆದು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಪ್ರಶ್ನೆಗಳ ಮೂಲಕವೇ ಪ್ರತಿಕ್ರಿಯಿಸಿದ್ದಾರೆ.
“ಮಣ್ಣಿನ ಮಕ್ಕಳು ಸಿನಿಮಾ ನಿರ್ಮಾಣ ಮಾಡಬಹುದಂತೆ, ಜಾಗ್ವಾರ್ ಆಗಬಹುದಂತೆ. ಆದರೆ, ಒಬ್ಬ ದಲಿತ ಬಲಿತ ಆಗಬಾರದಂತೆ. ಏನ್ರೀ ಕುಮಾರಸ್ವಾಮಿ ಅವರ ಲೆಕ್ಕ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ, ಸ್ಟಿಂಗ್ ಆಪರೇಷನ್ ವಿವಾದ, KPSC ಹಗರಣ ಹಾಗೂ 2028ರ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಸಾಧ್ಯತೆ ಕುರಿತ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ವಾಗ್ವಾದಕ್ಕೆ ಕಾರಣವಾಗಿವೆ. ಉಭಯ ನಾಯಕರ ಆರೋಪ-ಪ್ರತ್ಯಾರೋಪಗಳ ನಡುವೆ ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.