ಅಕ್ಷರ ಗಾತ್ರ

ರೇಣುಕಾಸ್ವಾಮಿ ಕೇಸ್ʼಗೆ ಬಿಗ್ ಟ್ವಿಸ್ಟ್! ಉಲ್ಟಾ ಹೊಡೆದ ಪ್ರತ್ಯಕ್ಷ ಸಾಕ್ಷಿ ಪುನೀತ್, ದರ್ಶನ್ ಬಗ್ಗೆ ಹೇಳಿದ್ದೇನು?

ರೇಣುಕಾಸ್ವಾಮಿ ಕೇಸ್ ಸಂಬಂಧ ನಟ Darshan, ರೇಣುಕಾಸ್ವಾಮಿ ಮತ್ತು Pavithra Gowda ಅವರ ಸಂಯೋಜಿತ ಭಾವಚಿತ್ರ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಪ್ರತ್ಯಕ್ಷ ಸಾಕ್ಷಿಗಳಲ್ಲಿ ಒಬ್ಬನಾದ ಪುನೀತ್ ನ್ಯಾಯಾಲಯದಲ್ಲಿ ತನ್ನ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಸಾಕ್ಷ್ಯ ನುಡಿದಿರುವುದು ಕುತೂಹಲ ಮೂಡಿಸಿದೆ. ಘಟನೆ ನಡೆದ ಶೆಡ್ ಬಳಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಅವರನ್ನು ನೋಡಿಲ್ಲ ಎಂದು ಪುನೀತ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾನೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಗಳಾದ ಕಿರಣ್ ಹಾಗೂ ಪುನೀತ್ ಅವರಿಗೆ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಸಾಕ್ಷ್ಯ ನುಡಿಯಲು ಸಮನ್ಸ್ ನೀಡಿತ್ತು. ಆದರೆ ಹಿಂದಿನ ವಿಚಾರಣೆಗೆ ಪುನೀತ್ ಗೈರಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ (NBW) ಹೊರಡಿಸಿತ್ತು.

ಇದೀಗ ನ್ಯಾಯಾಲಯಕ್ಕೆ ಹಾಜರಾದ ಪುನೀತ್, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿದಿದ್ದಾನೆ. ಈ ವೇಳೆ ಶೆಡ್ ಬಳಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಬಂದಿರಲಿಲ್ಲ. ಬೇರೆ ಯಾವುದೇ ಆರೋಪಿಗಳನ್ನೂ ತಾನು ಘಟನಾ ಸ್ಥಳದಲ್ಲಿ ನೋಡಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಪುನೀತ್ ನೀಡಿರುವ ಈ ಹೇಳಿಕೆ ಪ್ರಕರಣದ ವಿಚಾರಣೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಈ ಹಿಂದೆ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ದಾಖಲಿಸಿದ್ದ ಹೇಳಿಕೆಯಲ್ಲಿ ಪುನೀತ್ ಬೇರೆ ರೀತಿಯ ಮಾಹಿತಿ ನೀಡಿದ್ದ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಇದೀಗ ನ್ಯಾಯಾಲಯದಲ್ಲಿ ತನ್ನ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಸಾಕ್ಷ್ಯ ನುಡಿದಿರುವುದರಿಂದ ಪ್ರಕರಣದ ವಿಚಾರಣೆ ಮಹತ್ವ ಪಡೆದುಕೊಂಡಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪುನೀತ್‌ನನ್ನು ಪ್ರತಿಕೂಲ ಸಾಕ್ಷಿ (Hostile Witness) ಎಂದು ಪರಿಗಣಿಸಲು ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಹಿಂದಿನ ಹೇಳಿಕೆ ಹಾಗೂ ಈಗ ನೀಡಿರುವ ಸಾಕ್ಷ್ಯದಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಆತನನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಿ ಪ್ರಶ್ನಿಸಲು ಅವಕಾಶ ನೀಡುವಂತೆ ಕೋರಿದ್ದಾರೆ.

ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಿದರೆ, ಆತನನ್ನು ಸಾಕ್ಷಿಯಾಗಿ ಕರೆಸಿದ ಪ್ರಾಸಿಕ್ಯೂಷನ್ ಪಕ್ಷವೇ ನ್ಯಾಯಾಲಯದ ಅನುಮತಿಯೊಂದಿಗೆ ಪಾಟೀಸವಾಲು ನಡೆಸಲು ಅವಕಾಶವಿರುತ್ತದೆ. ಆದರೆ ಸಾಕ್ಷಿಯೊಬ್ಬ ತನ್ನ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದ ಮಾತ್ರಕ್ಕೆ ಆತನ ಸಂಪೂರ್ಣ ಸಾಕ್ಷ್ಯವನ್ನು ತಿರಸ್ಕರಿಸಲಾಗುವುದಿಲ್ಲ. ವಿಚಾರಣೆಯಲ್ಲಿರುವ ಇತರ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯ ಅದನ್ನು ಪರಿಶೀಲಿಸಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳ ಹೇಳಿಕೆಗಳು ವಿಚಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಬೆನ್ನಲ್ಲೇ ಪುನೀತ್ ನೀಡಿರುವ ಹೇಳಿಕೆ ಗಮನ ಸೆಳೆದಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಅಪರಾಧ ಮತ್ತು ಕಾನೂನು ವರದಿಗಾರರು (Crime & Legal Reporter)

NTV ಕನ್ನಡ ಸಂಪಾದಕೀಯ ತಂಡ.