ಚೆನ್ನೈ: ತಮಿಳು ಚಿತ್ರರಂಗದಲ್ಲಿ ಸದ್ಯ ರಾಜಕೀಯ ಪ್ರವೇಶದ ಚರ್ಚೆ ಜೋರಾಗಿದೆ. ನಟ ದಳಪತಿ ವಿಜಯ್ ರಾಜಕೀಯ ಅಖಾಡಕ್ಕೆ ಇಳಿದ ಬೆನ್ನಲ್ಲೇ ಮತ್ತಷ್ಟು ಸ್ಟಾರ್ ನಟರು ರಾಜಕೀಯಕ್ಕೆ ಬರಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ.
ಅದರಲ್ಲೂ ನಟ ಸೂರ್ಯ ಅವರ ರಾಜಕೀಯ ಪ್ರವೇಶದ ಬಗ್ಗೆ ಹಲವು ದಿನಗಳಿಂದ ಊಹಾಪೋಹಗಳು ಹರಿದಾಡುತ್ತಿದ್ದವು. ಇದೀಗ ಸ್ವತಃ ನಟ ಸೂರ್ಯ ಅವರೇ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ರಾಜಕೀಯ ಪ್ರವೇಶಿಸುವ ಉದ್ದೇಶವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಸಿನಿಮಾ ಪ್ರಚಾರದ ವೇಳೆ ರಾಜಕೀಯ ಪ್ರವೇಶದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ತಮಗೆ ರಾಜಕೀಯ ಕ್ಷೇತ್ರಕ್ಕೆ ನೇರವಾಗಿ ಕಾಲಿಡುವ ಯಾವುದೇ ನಿರ್ಧಾರವಿಲ್ಲ ಎಂದು ತಿಳಿಸಿದ್ದಾರೆ. ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಎಂದಲ್ಲ, ಆದರೆ ಸದ್ಯ ರಾಜಕೀಯ ಪ್ರವೇಶಿಸುವ ಆಲೋಚನೆ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಬೆಳವಣಿಗೆಗಳ ಮೇಲೆ ಸೂರ್ಯ ಕಣ್ಣಿಟ್ಟಿದ್ದಾರೆ!

ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ತಾವು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಸೂರ್ಯ ಹೇಳಿದ್ದಾರೆ. ಆದರೆ ರಾಜಕೀಯವನ್ನು ಗಮನಿಸುವುದಕ್ಕೂ, ನೇರವಾಗಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯಕ್ಕೆ ಬರಬೇಕಾದರೆ ಸರಿಯಾದ ದಾರಿ ಹಾಗೂ ಸ್ಪಷ್ಟವಾದ ಉದ್ದೇಶ ಇರಬೇಕು. ಸೂಕ್ತ ಸ್ಪಷ್ಟತೆ ಇಲ್ಲದೆ ರಾಜಕೀಯಕ್ಕೆ ಕಾಲಿಡುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ನಿಲುವನ್ನು ತಿಳಿಸಿದ್ದಾರೆ.
ಯುವಜನರಿಗೆ ಸೂರ್ಯ ಕೊಟ್ಟ ಕಿವಿಮಾತೇನು?
ರಾಜಕೀಯದ ಬಗ್ಗೆ ಮಾತನಾಡಿರುವ ಸೂರ್ಯ, ಯುವಜನರು ಈ ಕ್ಷೇತ್ರಕ್ಕೆ ಪ್ರವೇಶಿಸುವ ಮುನ್ನ ಸಂಪೂರ್ಣ ಅರಿವು ಮತ್ತು ಸ್ಪಷ್ಟತೆ ಹೊಂದಿರಬೇಕು ಎಂದು ಸಲಹೆ ನೀಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದು ರಾಜಕಾರಣಿಗಳ ಪ್ರಮುಖ ಜವಾಬ್ದಾರಿಯಾಗಬೇಕು ಎಂಬ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.
ಇನ್ನು ಭ್ರಷ್ಟಾಚಾರವನ್ನು ಯಾರೋ ಒಬ್ಬರು ಬಂದು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ. ರಾಜಕೀಯಕ್ಕೆ ಬರುವ ಪ್ರತಿಯೊಬ್ಬರೂ ಪ್ರಾಮಾಣಿಕತೆ, ಬದ್ಧತೆ ಮತ್ತು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಸೂರ್ಯ ಹೇಳಿದ್ದಾರೆ.
ವಿಜಯ್ ರಾಜಕೀಯ ಹಾದಿಯಲ್ಲಿ, ಸೂರ್ಯ ಮಾತ್ರ ದೂರ!
ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ನಂಟು ಹಲವು ದಶಕಗಳ ಇತಿಹಾಸ ಹೊಂದಿದೆ. ಎಂಜಿಆರ್ ಸೇರಿದಂತೆ ಅನೇಕ ಸಿನಿಮಾ ನಟರು ರಾಜಕೀಯ ಪ್ರವೇಶಿಸಿ ಯಶಸ್ಸು ಕಂಡಿದ್ದಾರೆ. ಇತ್ತೀಚೆಗೆ ನಟ ದಳಪತಿ ವಿಜಯ್ ಕೂಡ ರಾಜಕೀಯ ಪ್ರವೇಶಿಸುವ ಮೂಲಕ ತಮಿಳುನಾಡಿನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ಹೀಗಾಗಿ ಸೂರ್ಯ ಕೂಡ ರಾಜಕೀಯಕ್ಕೆ ಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಇದೀಗ ಅವರ ಸ್ಪಷ್ಟನೆಯಿಂದ ಈ ಎಲ್ಲಾ ಊಹಾಪೋಹಗಳಿಗೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ. ಸದ್ಯಕ್ಕೆ ಸಿನಿಮಾಗಳಿಗೆ ಆದ್ಯತೆ ನೀಡಲು ಮುಂದಾಗಿರುವ ಸೂರ್ಯ, ರಾಜಕೀಯವನ್ನು ಹೊರಗಿನಿಂದಲೇ ಗಮನಿಸಲಿದ್ದಾರೆ.