ಸ್ಯಾಂಡಲ್ವುಡ್ ನಟ ಡಾರ್ಲಿಂಗ್ ಕೃಷ್ಣ ಅವರು ತಮ್ಮ ವಿಭಿನ್ನ ಕಥೆಗಳ ಆಯ್ಕೆ ಹಾಗೂ ಕೌಟುಂಬಿಕ ಕಥಾಹಂದರದ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಆದರೆ ಅವರು ಹೆಚ್ಚಾಗಿ ಫ್ಯಾಮಿಲಿ ಡ್ರಾಮಾ ಸಿನಿಮಾಗಳಲ್ಲೇ ಕಾಣಿಸಿಕೊಳ್ಳುತ್ತಿರುವುದೇಕೆ? ಆ್ಯಕ್ಷನ್ ಸಿನಿಮಾಗಳನ್ನು ಯಾಕೆ ಮಾಡುತ್ತಿಲ್ಲ? ಎಂಬ ಪ್ರಶ್ನೆಗಳಿಗೆ ಇದೀಗ ಸ್ವತಃ ಕೃಷ್ಣ ಉತ್ತರ ನೀಡಿದ್ದಾರೆ. ಅದೂ ಟೊಮ್ಯಾಟೋ ಬೆಳೆಗಾರನ ಉದಾಹರಣೆ ನೀಡುವ ಮೂಲಕ!
ಡಾರ್ಲಿಂಗ್ ಕೃಷ್ಣ, ಬಹುಭಾಷಾ ನಟ ಪ್ರಕಾಶ್ ರಾಜ್, ಅಮೃತಾ ಅಯ್ಯಂಗಾರ್ ಹಾಗೂ ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಫಾದರ್’ ಸಿನಿಮಾದ ‘ಗಗನದ ನೇಸರ’ ಹಾಡು ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷ್ಣ, ತಮ್ಮ ಸಿನಿಮಾ ಆಯ್ಕೆಯ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
‘ನಾನು ಟೊಮ್ಯಾಟೋ ಬೆಳೆಯುವವನು’ ಎಂದ ಕೃಷ್ಣ!
ತಮ್ಮನ್ನು ಫ್ಯಾಮಿಲಿ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪ್ರಶ್ನಿಸುವವರಿಗೆ ಕೃಷ್ಣ ವಿಶಿಷ್ಟ ರೀತಿಯಲ್ಲಿ ಉತ್ತರ ನೀಡಿದ್ದಾರೆ.‘ನಾನು ಫ್ಯಾಮಿಲಿ ಸಿನಿಮಾನೇ ಮಾಡೋದು. ಯಾಕೆ ಆ್ಯಕ್ಷನ್ ಮಾಡಲ್ಲ ಎಂದು ಕೇಳುತ್ತಾರೆ. ನಾನು ಟೊಮ್ಯಾಟೋ ಬೆಳೆಯುವವನು. ರೇಟ್ ಇರಲಿ, ಬಿಡಲಿ ಅದನ್ನೇ ಬೆಳೆಯುತ್ತಿದ್ದೇನೆ. ಈಗ ಟೊಮ್ಯಾಟೋಗೆ ಸೀಸನ್ ಬಂದಿದೆ. ಅಂದರೆ ಫ್ಯಾಮಿಲಿ ಸಿನಿಮಾಗಳಿಗೆ ಒಳ್ಳೆಯ ಸಮಯ ಬಂದಿದೆ’ ಎಂದು ಕೃಷ್ಣ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಹೊಡಿಬಡಿ ಸಿನಿಮಾಗಳಿಂದ ಸ್ವಲ್ಪ ವಿರಾಮ ಪಡೆದು ಕೌಟುಂಬಿಕ ಕಥಾಹಂದರದ ಚಿತ್ರಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
‘ಫಾದರ್’ ಕಥೆಯಲ್ಲಿ ತಾಕತ್ತಿದೆ!
‘ಫಾದರ್ ಸಿನಿಮಾದ ಕಥೆ ತುಂಬ ಚೆನ್ನಾಗಿದೆ. ಅದರ ವಿಷಯದಲ್ಲಿ ತಾಕತ್ತಿದೆ. ಈ ಚಿತ್ರದ ಬಗ್ಗೆ ನನಗೆ ಸಾಕಷ್ಟು ಉತ್ಸಾಹವಿದೆ. ಪ್ರೇಕ್ಷಕರು ಇಂತಹ ಸಿನಿಮಾಗಳನ್ನು ನೋಡುತ್ತಿದ್ದಾರೆ. ನಿರ್ಮಾಪಕ ಚಂದ್ರು ಅವರಿಗೆ ಈ ಚಿತ್ರದಿಂದ ಒಳ್ಳೆಯ ಲಾಭ ಸಿಗಲಿ’ ಎಂದು ಕೃಷ್ಣ ಹಾರೈಸಿದ್ದಾರೆ.
ಡಿಸೆಂಬರ್ 4ಕ್ಕೆ ‘ಫಾದರ್’ ಬಿಡುಗಡೆ
‘ಫಾದರ್’ ಚಿತ್ರವನ್ನು ನಿರ್ಮಾಪಕ ಆರ್. ಚಂದ್ರು ತಮ್ಮ ಆರ್ಸಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಅವರ ಪತ್ನಿ ಯಮುನಾ ಚಂದ್ರಶೇಖರ್ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ರಾಜಮೋಹನ್ ನಿರ್ದೇಶನದ ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ಬಿಡುಗಡೆಯಾದ ‘ಗಗನದ ನೇಸರ’ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.
ಡಿಸೆಂಬರ್ 4ರಂದು ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಯೋಜಿಸಲಾಗಿದೆ.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಆರ್. ಚಂದ್ರು ಈ ಚಿತ್ರವನ್ನು ನಿರ್ಮಿಸಿದ್ದು, ಕೌಟುಂಬಿಕ ಕಥಾಹಂದರ ಹೊಂದಿರುವ ‘ಫಾದರ್’ ಪ್ರೇಕ್ಷಕರ ಮನಗೆಲ್ಲಲಿದೆಯೇ ಎಂಬ ಕುತೂಹಲ ಮೂಡಿದೆ.