ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ತೀವ್ರಗೊಂಡಿದೆ.
ರಷ್ಯಾದ ಪ್ರಮುಖ ತೈಲ ಸಂಸ್ಕರಣಾಗಾರವೊಂದನ್ನು ಗುರಿಯಾಗಿಸಿಕೊಂಡು ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. ದಾಳಿಯ ಬೆನ್ನಲ್ಲೇ ತೈಲ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಸಂಸ್ಕರಣಾಗಾರದ ಸುತ್ತಮುತ್ತ ದಟ್ಟ ಕಪ್ಪು ಹೊಗೆ ಆವರಿಸಿದೆ.
ಉಕ್ರೇನ್ ಗಡಿಗೆ ಸಮೀಪದಲ್ಲಿರುವ ರಷ್ಯಾದ ತೈಲ ಸಂಸ್ಕರಣಾಗಾರದ ಇಂಧನ ಶೇಖರಣಾ ಟ್ಯಾಂಕ್‌ಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಡ್ರೋನ್ ದಾಳಿಯ ಪರಿಣಾಮವಾಗಿ ಸಂಸ್ಕರಣಾಗಾರದ ಹಲವು ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತೈಲ ಟ್ಯಾಂಕ್‌ಗಳು ಹೊತ್ತಿ ಉರಿಯುತ್ತಿದ್ದು, ಕಿಲೋಮೀಟರ್‌ಗಳಷ್ಟು ದೂರದಿಂದಲೂ ದಟ್ಟ ಹೊಗೆ ಕಾಣಿಸುತ್ತಿದೆ.
ದಾಳಿಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ರಷ್ಯಾದ ಯುದ್ಧ ಕಾರ್ಯಾಚರಣೆಗಳಿಗೆ ಇಂಧನ ಪೂರೈಸುವ ಪ್ರಮುಖ ಮೂಲಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ದಾಳಿ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.