ಅಕ್ಷರ ಗಾತ್ರ

ವಿಶ್ವಕಪ್ ಗೆಲ್ಲಬೇಕಾದರೆ ಗಿಲ್ ಮದುವೆಯಾಗಲೇಬೇಕು! ರೋಹಿತ್ ಶರ್ಮಾ ಹೇಳಿದ್ದೇನು?

ಕ್ರಿಕೆಟ್ ಮೈದಾನದಲ್ಲಿ ಟೀಮ್ ಇಂಡಿಯಾ ಜೆರ್ಸಿ ಧರಿಸಿ ನಿಂತಿರುವ Rohit Sharma ಮತ್ತು Shubman Gill

ಮದುವೆಯಾದರೆ ವಿಶ್ವಕಪ್ ಗೆಲ್ಲಬಹುದು ಎಂಬ ಕಾಮಿಡಿಯನ್ ಆಕಾಶ್ ಗುಪ್ತಾ ಅವರ ಮಾತಿಗೆ ರೋಹಿತ್ ಶರ್ಮಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಶುಭ್‌ಮನ್ ಗಿಲ್‌ಗೆ ಮದುವೆ ಮಾಡಿಸಲು ನಾನೇ ಮುಂದೆ ನಿಲ್ಲುತ್ತೇನೆ ಎಂದು ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಜೊತೆಗೆ ಹಾಸ್ಯಪ್ರಜ್ಞೆ ಮತ್ತು ನೇರನುಡಿಗೂ ಹೆಸರುವಾಸಿ. ಇದೀಗ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅವರ ಹೊಸ ಕಾರ್ಯಕ್ರಮ ‘ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ’ ಶೋನಲ್ಲಿ ಶುಭ್‌ಮನ್ ಗಿಲ್ ಮದುವೆ ಕುರಿತು ಆಡಿರುವ ತಮಾಷೆಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

2027ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಭಾರತಕ್ಕೆ ಗೆಲ್ಲಿಸಿಕೊಡಲು ಬೇಕಿದ್ದರೆ ತಾನೇ ಮುಂದೆ ನಿಂತು ಗಿಲ್‌ಗೆ ಮದುವೆ ಮಾಡಿಸಲು ಸಿದ್ಧ ಎಂದು ರೋಹಿತ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಮದುವೆಯಾದರೆ ವಿಶ್ವಕಪ್ ಗೆಲುವು ಖಚಿತವೇ?

ಈ ವಿಶೇಷ ಸಂಚಿಕೆಯಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಆಕಾಶ್ ಗುಪ್ತಾ ಮತ್ತು ಶಾದಿ.ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆ ಆಕಾಶ್ ಗುಪ್ತಾ ಒಂದು ತಮಾಷೆಯ ಸಿದ್ಧಾಂತವನ್ನು ಮುಂದಿಟ್ಟರು.

“ಕ್ರಿಕೆಟ್ ಇತಿಹಾಸವನ್ನು ಗಮನಿಸಿದರೆ, ಯಾವ ತಂಡದ ನಾಯಕ ಮದುವೆಯಾಗುತ್ತಾರೋ, ಮರುವರ್ಷ ಆ ತಂಡ ವಿಶ್ವಕಪ್ ಗೆಲ್ಲುತ್ತದೆ” ಎಂದು ಅವರು ಹೇಳಿದರು. ಇದಕ್ಕೆ ಉದಾಹರಣೆಯಾಗಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮದುವೆಯಾದ ಬಳಿಕ 2023ರ ಏಕದಿನ ವಿಶ್ವಕಪ್ ಗೆದ್ದಿದ್ದನ್ನು ಉಲ್ಲೇಖಿಸಿದರು.

ಗಿಲ್‌ಗೆ ಮದುವೆ ಪ್ರಸ್ತಾಪ ಕಳುಹಿಸಿದ ಶಾದಿ.ಕಾಮ್!

ಆಕಾಶ್ ಮಾತಿಗೆ ಪ್ರತಿಕ್ರಿಯಿಸಿದ ಅನುಪಮ್ ಮಿತ್ತಲ್, “ನಮ್ಮ ಶಾದಿ.ಕಾಮ್ ತಂಡ ಈಗಾಗಲೇ ಭಾರತದ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್ ಅವರ ಪ್ರೊಫೈಲ್ ಸಿದ್ಧಪಡಿಸಿ ಮದುವೆಯ ಪ್ರಸ್ತಾಪ ಕಳುಹಿಸಿದೆ. ಅವರು ಕೇವಲ ‘ರೈಟ್ ಸ್ವೈಪ್’ ಮಾಡಬೇಕಷ್ಟೇ. ಆದರೆ ಗಿಲ್ ಸದ್ಯಕ್ಕೆ ಮದುವೆಯಾಗಲು ನಿರಾಕರಿಸಿದ್ದಾರೆ” ಎಂದು ತಮಾಷೆ ಮಾಡಿದರು.

ಇದನ್ನು ಕೇಳುತ್ತಿದ್ದ ರೋಹಿತ್ ಶರ್ಮಾ ಕೂಡ ಸುಮ್ಮನಿರಲಿಲ್ಲ. “ವಿಶ್ವಕಪ್ ಗೆಲ್ಲಲು ನಾನು ಏನು ಬೇಕಾದರೂ ಮಾಡಲು ಸಿದ್ಧ. ನಾನೇ ಮುಂದೆ ನಿಂತು ಶುಭ್‌ಮನ್ ಗಿಲ್‌ಗೆ ಮದುವೆ ಮಾಡಿಸುತ್ತೇನೆ” ಎಂದು ಹೇಳಿ ವೇದಿಕೆಯಲ್ಲಿ ನಗೆ ಮೂಡಿಸಿದರು.

2027ರ ವಿಶ್ವಕಪ್ ಮೇಲೆ ರೋಹಿತ್ ಕಣ್ಣು

ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ರೋಹಿತ್ ಶರ್ಮಾ ಅವರಿಗೆ ಏಕದಿನ ವಿಶ್ವಕಪ್ ಗೆಲ್ಲುವುದು ದೊಡ್ಡ ಕನಸಾಗಿದೆ. 2023ರ ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಟ್ರೋಫಿ ಕೈತಪ್ಪಿತ್ತು. ಹೀಗಾಗಿ 2027ರ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲಲಿ ಎಂಬ ಆಶಯವನ್ನು ರೋಹಿತ್ ತಮ್ಮದೇ ಹಾಸ್ಯ ಶೈಲಿಯಲ್ಲಿ ವ್ಯಕ್ತಪಡಿಸಿದ್ದಾರೆ. ಯುವ ನಾಯಕ ಶುಭ್‌ಮನ್ ಗಿಲ್‌ಗೆ ಬೆಂಬಲ ಸೂಚಿಸುವುದರ ಜೊತೆಗೆ, ವಿಶ್ವಕಪ್ ಗೆಲುವಿಗಾಗಿ ಗಿಲ್ ಮದುವೆಗೂ ತಾವೇ ಸಿದ್ಧ ಎಂದು ಹೇಳಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಕ್ರೀಡಾ ವರದಿಗಾರರು (Sports Reporter)

NTV ಕನ್ನಡ ಸಂಪಾದಕೀಯ ತಂಡ.