ಬೆಂಗಳೂರು: ಮದುವೆಗೆ ಇನ್ನು ಒಂದು ತಿಂಗಳು ಬಾಕಿ ಇರುವಾಗಲೇ 24 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.
ಭೂಮಿಕಾ (24) ಮೃತಪಟ್ಟ ಯುವತಿ. ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಯುವಕನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಾರಣಕ್ಕೆ ಮಗಳು ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಭೂಮಿಕಾಳ ಮದುವೆ ಮುಂದಿನ ತಿಂಗಳು ಬಾಲ್ಯದ ಗೆಳೆಯ ಕಿರಣ್ ಜೊತೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಿದ್ಧತೆಗಳು ಕೂಡ ಜೋರಾಗಿ ನಡೆದಿದ್ದವು. ಆದರೆ, ಮದುವೆಯ ಸಂಭ್ರಮದಲ್ಲಿರಬೇಕಿದ್ದ ಕುಟುಂಬದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.
ಘಟನೆ ನಡೆದ ದಿನ ಗೌತಮ್ ಎಂಬ ಯುವಕ ಭೂಮಿಕಾಳ ಕುಟುಂಬಕ್ಕೆ ಕರೆ ಮಾಡಿ, ಆಕೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣ ಮನೆಗೆ ಧಾವಿಸಿದ ಕುಟುಂಬಸ್ಥರು ಬಾಗಿಲು ಮುರಿದು ಒಳಪ್ರವೇಶಿಸಿ ಭೂಮಿಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮದುವೆಗೂ ಮುನ್ನವೇ ಕೊರಳಲ್ಲಿ ಅರಿಶಿನದ ತಾಳಿ!
ಮರಣೋತ್ತರ ಪರೀಕ್ಷೆಗಾಗಿ ಭೂಮಿಕಾಳ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದಾಗ ಆಕೆಯ ಕೊರಳಲ್ಲಿ ಅರಿಶಿನದ ಕೊಂಬಿನ ತಾಳಿ ಇರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇತ್ತೀಚೆಗೆ ಕಾಲೇಜು ಪ್ರವಾಸದಿಂದ ವಾಪಸಾದ ಬಳಿಕ ಭೂಮಿಕಾ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ. ಯಾರೊಂದಿಗೂ ಸರಿಯಾಗಿ ಮಾತನಾಡದೆ, ತನಗೆ ತುಂಬಾ ಹಿಂಸೆಯಾಗುತ್ತಿದೆ ಎಂದು ಅಜ್ಜಿಯ ಬಳಿ ಹೇಳಿಕೊಂಡಿದ್ದಳಂತೆ. ರಾತ್ರಿಯಿಡೀ ಫೋನ್‌ನಲ್ಲಿ ಮಾತನಾಡುತ್ತಾ ಅಳುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಭೂಮಿಕಾಳ ಫೋನ್ ಕರೆಗಳ ವಿವರ ಪರಿಶೀಲಿಸಿದಾಗ ಗೌತಮ್ ಎಂಬಾತನ ಜೊತೆ ಹಲವು ಬಾರಿ ಮಾತನಾಡಿರುವುದು ಗೊತ್ತಾಗಿದೆ. ಆತ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಗೌತಮ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭೂಮಿಕಾಳ ಸಾವಿಗೆ ನಿಖರ ಕಾರಣವೇನು? ಆಕೆಯ ಕೊರಳಿಗೆ ತಾಳಿ ಕಟ್ಟಿದ್ದು ಯಾರು? ಎಂಬ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ.