ಅಕ್ಷರ ಗಾತ್ರ

ರೇಣುಕಾಸ್ವಾಮಿ ಕೇಸ್ʼನಲ್ಲಿ ಸ್ಯಾಂಡಲ್ ವುಡ್ ನಟರ ಸಾಕ್ಷ್ಯ: ಚಿಕ್ಕಣ್ಣಗೆ ಆತಂಕ, ಯಶಸ್ ಸೂರ್ಯ ಹೇಳಿಕೆಗೆ ಮತ್ತೊಂದು ಟ್ವಿಸ್ಟ್!

ರೇಣುಕಾಸ್ವಾಮಿ ಕೇಸ್ ವಿಚಾರಣೆ ಹಿನ್ನೆಲೆಯಲ್ಲಿ ನಟರಾದ Chikkanna, Darshan ಮತ್ತು Yashas Surya.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸುದ್ದಿಯಾಗಿದೆ. ನಟ ದರ್ಶನ್ ಪ್ರಕರಣದಲ್ಲಿ ಸಾಕ್ಷ್ಯ ನೀಡಲು ಕೋರ್ಟ್ ಮೆಟ್ಟಿಲೇರಿದ್ದ ಕಾಮಿಡಿ ನಟ ಚಿಕ್ಕಣ್ಣ, ಹೇಳಿಕೆ ದಾಖಲಿಸುವ ವೇಳೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪದೇಪದೇ ತಡಬಡಿಸುತ್ತಿದ್ದ ಚಿಕ್ಕಣ್ಣಗೆ ನ್ಯಾಯಾಧೀಶರೇ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಮತ್ತೊಂದೆಡೆ ನಟ ಯಶಸ್ ಸೂರ್ಯ ನೀಡಿರುವ ಹೇಳಿಕೆಯೂ ವಿಚಾರಣೆಯಲ್ಲಿ ಗಮನ ಸೆಳೆದಿದೆ.

ಬೆಂಗಳೂರಿನ ಸಿಸಿಎಚ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ನಟ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಹಾಜರಾಗಿದ್ದರು. ಘಟನೆ ನಡೆದ ದಿನ ದರ್ಶನ್ ಹಾಗೂ ಅವರ ಸ್ನೇಹಿತರೊಂದಿಗೆ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದ ವಿಚಾರವಾಗಿ ಇಬ್ಬರೂ ಸಾಕ್ಷ್ಯ ನೀಡಿದ್ದಾರೆ.

ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸುವಾಗ ಚಿಕ್ಕಣ್ಣ ಪದೇಪದೇ ಆತಂಕಗೊಂಡು ಮಾತನಾಡಲು ತಡಬಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕರು, ‘ಟೆನ್ಷನ್ ಆಗಬೇಡಿ, ನೀವೇನೂ ಅಪರಾಧ ಮಾಡಿಲ್ಲ’ ಎಂದು ಧೈರ್ಯ ತುಂಬಿದ್ದಾರೆ. ಚಿಕ್ಕಣ್ಣ ಅವರ ಸ್ಥಿತಿಯನ್ನು ಗಮನಿಸಿದ ನ್ಯಾಯಾಧೀಶರು ಸುಮಾರು 10 ನಿಮಿಷ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಬಳಿಕ ಮತ್ತೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ.

ಆದರೆ, ಚಿಕ್ಕಣ್ಣ ಅವರ ಸಾಕ್ಷ್ಯ ಸಂಪೂರ್ಣವಾಗಿ ದಾಖಲಾಗಿಲ್ಲ. ಆರಂಭದಲ್ಲಿ ಮರುದಿನ ಹೇಳಿಕೆ ದಾಖಲಿಸಲು ಅವಕಾಶ ನೀಡಲಾಗಿದ್ದರೂ, ಇತರ ಸಾಕ್ಷಿಗಳ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕ ನಿಗದಿಪಡಿಸಿ ಸಮನ್ಸ್ ನೀಡಿದ ಬಳಿಕ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

ಇನ್ನೊಂದೆಡೆ ನಟ ಯಶಸ್ ಸೂರ್ಯ, ದರ್ಶನ್ ಅವರೊಂದಿಗಿನ ಹಲವು ವರ್ಷಗಳ ಪರಿಚಯದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ದಿನ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್‌ನಲ್ಲಿ ದರ್ಶನ್, ಪ್ರದೂಷ್, ಚಿಕ್ಕಣ್ಣ, ನಾಗರಾಜ್ ಹಾಗೂ ವಿನಯ್ ಅವರೊಂದಿಗೆ ಊಟ ಮಾಡಿದ್ದಾಗಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಸಿನಿಮಾ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿದ್ದಾಗಿ ಹೇಳಿದ್ದಾರೆ.

ಆರೋಪಿ ಪವನ್ ರೆಸ್ಟೋರೆಂಟ್‌ಗೆ ಬಂದಿರುವ ಬಗ್ಗೆ ತಮಗೆ ಗೊತ್ತಿಲ್ಲ. ಆ ಸಮಯದಲ್ಲಿ ತಾವು ಹೊರಗಡೆ ಇದ್ದೆ ಎಂದು ಯಶಸ್ ಸೂರ್ಯ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಯಶಸ್ ಸೂರ್ಯ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಅನುಮತಿ ಕೋರಿದ್ದು, ಕೋರ್ಟ್ ಸಮ್ಮತಿಸಿದೆ. ಪಾಟೀ ಸವಾಲಿಗೆ ಸಮಯಾವಕಾಶ ಕೇಳಿರುವುದರಿಂದ ಮುಂದಿನ ದಿನಾಂಕಕ್ಕೆ ಪ್ರಕ್ರಿಯೆ ಮುಂದೂಡಲಾಗಿದೆ.

ವಿಚಾರಣೆ ಬಳಿಕ ಮಾತನಾಡಿದ ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ಇಬ್ಬರು ನಟರ ಸಾಕ್ಷ್ಯ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಅವರ ಹೇಳಿಕೆಗಳು ಆರೋಪಿಗಳ ಪರವಾಗಿವೆಯೇ ಅಥವಾ ವಿರುದ್ಧವಾಗಿವೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರ ಅಪೂರ್ಣ ಸಾಕ್ಷ್ಯಗಳು ಗಮನ ಸೆಳೆದಿದ್ದು, ಮುಂದಿನ ವಿಚಾರಣೆಯಲ್ಲಿ ಇಬ್ಬರು ನಟರು ನೀಡಲಿರುವ ಹೇಳಿಕೆಗಳ ಬಗ್ಗೆ ಕುತೂಹಲ ಮೂಡಿದೆ.

 

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮನರಂಜನಾ ವರದಿಗಾರರು (Entertainment & Cinema Reporter)

NTV ಕನ್ನಡ ಸಂಪಾದಕೀಯ ತಂಡ.