ಬೆಂಗಳೂರು: ದುಬಾರಿ ಔಷಧಗಳ ಖರ್ಚಿನಿಂದ ಕಂಗೆಟ್ಟಿರುವ ರೋಗಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ.
ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣದ ಬೆನ್ನಲ್ಲೇ, ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ದುಬಾರಿ ಔಷಧಗಳ ದರ ನಿಯಂತ್ರಣಕ್ಕೂ ರಾಜ್ಯ ಔಷಧ ಆಡಳಿತ ಇಲಾಖೆ ಮುಂದಾಗಿದೆ. ಈ ಸಂಬಂಧ ಅಗತ್ಯ ಔಷಧಗಳ ಪಟ್ಟಿ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.
ಹೃದಯ ಮತ್ತು ಕಿಡ್ನಿ ಕಾಯಿಲೆಗಳಿಗೆ ದೀರ್ಘಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ. ಪ್ರತಿನಿತ್ಯ ಔಷಧ ಸೇವಿಸುವ ಅನಿವಾರ್ಯತೆ ಇರುವುದರಿಂದ ರೋಗಿಗಳಿಗೆ ಚಿಕಿತ್ಸೆಯ ವೆಚ್ಚ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಈ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಔಷಧಗಳ ಬೆಲೆ ನಿಯಂತ್ರಣಕ್ಕೆ ರಾಜ್ಯ ಔಷಧ ಆಡಳಿತ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
ಯಾವ ಔಷಧಗಳ ಬೆಲೆ ಇಳಿಕೆಗೆ ಪ್ರಯತ್ನ?
ರಕ್ತದೊತ್ತಡ ನಿಯಂತ್ರಣ, ಹೃದಯ ವೈಫಲ್ಯದ ಚಿಕಿತ್ಸೆ, ಹೃದಯ ಬಡಿತ ನಿಯಂತ್ರಣ ಹಾಗೂ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಬಳಸುವ ಔಷಧಗಳ ಬೆಲೆಗಳ ಕುರಿತು ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ. ಹೃದಯಾಘಾತದ ಚಿಕಿತ್ಸೆ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಬಳಸುವ ಔಷಧಗಳ ದರವನ್ನೂ ಪರಿಶೀಲಿಸಲಾಗುತ್ತಿದೆ.

ಔಷಧಗಳ ಖರೀದಿ ವೆಚ್ಚ ಮತ್ತು ಮಾರುಕಟ್ಟೆಯಲ್ಲಿನ ಮಾರಾಟ ದರಗಳ ನಡುವಿನ ವ್ಯತ್ಯಾಸವನ್ನು ವಿಶ್ಲೇಷಿಸಿ, ಯಾವ ಔಷಧಗಳಿಗೆ ಬೆಲೆ ನಿಯಂತ್ರಣ ಅಗತ್ಯವಿದೆ ಎಂಬುದನ್ನು ಗುರುತಿಸಲಾಗುತ್ತಿದೆ. ಬಳಿಕ ಸಮಗ್ರ ಪಟ್ಟಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ಉದ್ದೇಶಿಸಲಾಗಿದೆ.
ಡಯಾಲಿಸಿಸ್ ರೋಗಿಗಳಿಗೂ ಸಿಗುತ್ತಾ ಪರಿಹಾರ?
ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ನಿಯಮಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ಚಿಕಿತ್ಸೆಯ ವೆಚ್ಚ ದೊಡ್ಡ ಹೊರೆಯಾಗಿದೆ. ಇಂತಹ ರೋಗಿಗಳಿಗೆ ಅಗತ್ಯವಿರುವ ಔಷಧಗಳ ಬೆಲೆಯ ಬಗ್ಗೆಯೂ ಇಲಾಖೆ ಮಾಹಿತಿ ಕಲೆಹಾಕುತ್ತಿದೆ.
ಔಷಧಗಳ ಪಟ್ಟಿ ಸಿದ್ಧವಾದ ಬಳಿಕ, ಕೇಂದ್ರದ ರಾಷ್ಟ್ರೀಯ ಔಷಧ ಬೆಲೆ ನಿಗಾ ಪ್ರಾಧಿಕಾರ (NPPA)ಕ್ಕೆ ಪತ್ರ ಬರೆದು ಅಗತ್ಯ ಔಷಧಗಳನ್ನು ಬೆಲೆ ನಿಯಂತ್ರಣದ ವ್ಯಾಪ್ತಿಗೆ ತರುವಂತೆ ಮನವಿ ಸಲ್ಲಿಸಲು ಸಿದ್ಧತೆ ನಡೆದಿದೆ.
ಕೇಂದ್ರದ ನಿರ್ಧಾರದತ್ತ ರೋಗಿಗಳ ನಿರೀಕ್ಷೆ
ದುಬಾರಿ ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣದ ಬಳಿಕ ಇದೀಗ ಹೃದಯ ಮತ್ತು ಕಿಡ್ನಿ ಔಷಧಗಳ ದರ ಇಳಿಕೆಗೂ ಪ್ರಯತ್ನ ನಡೆಯುತ್ತಿದೆ. ರಾಜ್ಯ ಸರ್ಕಾರದ ಈ ಕ್ರಮ ಯಶಸ್ವಿಯಾದರೆ ದೀರ್ಘಕಾಲ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಔಷಧಗಳ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ.
ಆದರೆ, ಯಾವ ಔಷಧಗಳು ಬೆಲೆ ನಿಯಂತ್ರಣದ ವ್ಯಾಪ್ತಿಗೆ ಬರಲಿವೆ ಮತ್ತು ಅವುಗಳ ದರ ಎಷ್ಟು ಇಳಿಕೆಯಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಕೇಂದ್ರದ NPPA ತೆಗೆದುಕೊಳ್ಳುವ ನಿರ್ಧಾರ ಮಹತ್ವದ್ದಾಗಿದೆ.