ಕ್ರೀಡಾಸ್ಫೂರ್ತಿ ಮತ್ತು ಪರಸ್ಪರ ಗೌರವಕ್ಕೆ ಸಾಕ್ಷಿಯಾಗುವಂತಹ ಅಪರೂಪದ ಘಟನೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಏಕದಿನ ಪಂದ್ಯ ಸಾಕ್ಷಿಯಾಗಿದೆ. ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಟೀಂ ಇಂಡಿಯಾದ ಬ್ಯಾಟಿಂಗ್ ಪಡೆಯನ್ನು ಧೂಳೀಪಟ ಮಾಡಿದ ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿಗೆ, ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕ್ಷಣದ ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
27 ರನ್‌ಗೆ 6 ವಿಕೆಟ್ ಕಬಳಿಸಿದ ಹೆನ್ರಿ
ನಾಲ್ಕನೇ ಏಕದಿನ ಪಂದ್ಯದಲ್ಲಿ ಮ್ಯಾಟ್ ಹೆನ್ರಿ ತಮ್ಮ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು. ಕೇವಲ 27 ರನ್‌ಗಳನ್ನು ನೀಡಿ 6 ವಿಕೆಟ್ ಕಬಳಿಸಿದ ಅವರು, ಭಾರತದ ಪ್ರಮುಖ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ನ್ಯೂಜಿಲೆಂಡ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ನ್ಯೂಜಿಲೆಂಡ್ ನೀಡಿದ್ದ 334 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಹೆನ್ರಿ ದಾಳಿಗೆ ತತ್ತರಿಸಿ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಹೆನ್ರಿ ಟೀಂ ಇಂಡಿಯಾಗೆ ಆರಂಭಿಕ ಆಘಾತ ನೀಡಿದ್ದರು.

ಹೆನ್ರಿಗೆ ಟೀಂ ಇಂಡಿಯಾ ಜೆರ್ಸಿ ಉಡುಗೊರೆ ನೀಡಿದ ಕೊಹ್ಲಿ
ಪಂದ್ಯ ಮುಕ್ತಾಯದ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಮತ್ತು ಮ್ಯಾಟ್ ಹೆನ್ರಿ ಪರಸ್ಪರ ಮಾತನಾಡುತ್ತಿರುವುದು ಕಂಡುಬಂದಿದೆ. ಇದೇ ಸಂದರ್ಭದಲ್ಲಿ ಕೊಹ್ಲಿ, ಹೆನ್ರಿಗೆ ಟೀಂ ಇಂಡಿಯಾದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಎದುರಾಳಿ ಆಟಗಾರನ ಅತ್ಯುತ್ತಮ ಪ್ರದರ್ಶನವನ್ನು ಗೌರವಿಸಿದ ಕೊಹ್ಲಿಯ ಈ ನಡೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹೆನ್ರಿ ವಿರುದ್ಧ ಕೊಹ್ಲಿ ದಾಖಲೆ ಹೇಗಿದೆ?
ಏಕದಿನ ಕ್ರಿಕೆಟ್‌ನಲ್ಲಿ ಮ್ಯಾಟ್ ಹೆನ್ರಿ ವಿರುದ್ಧ ವಿರಾಟ್ ಕೊಹ್ಲಿ ಈವರೆಗೆ 60 ಎಸೆತಗಳನ್ನು ಎದುರಿಸಿ 59 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಹೆನ್ರಿ ಮೂರು ಬಾರಿ ಕೊಹ್ಲಿ ವಿಕೆಟ್ ಪಡೆದಿದ್ದಾರೆ. ಹೆನ್ರಿ ವಿರುದ್ಧ ಕೊಹ್ಲಿ 98.33 ಸ್ಟ್ರೈಕ್‌ರೇಟ್ ಹೊಂದಿದ್ದಾರೆ.
ಇನ್ನು ಮ್ಯಾಟ್ ಹೆನ್ರಿ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಆಡಿದ 12 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಬಾರಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿದ ಬೌಲರ್‌ಗಳ ಪೈಕಿ ಅವರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್ ಗೊಂಚಲು ಪಡೆದ ಬೌಲರ್‌ಗಳ ಪಟ್ಟಿಯಲ್ಲೂ ಶೇನ್ ಬಾಂಡ್ ಅವರ ದಾಖಲೆಯನ್ನು ಹೆನ್ರಿ ಸರಿಗಟ್ಟಿದ್ದಾರೆ. ರಿಚರ್ಡ್ ಹ್ಯಾಡ್ಲಿ (5) ಮತ್ತು ಟ್ರೆಂಟ್ ಬೌಲ್ಟ್ (6) ಈ ಪಟ್ಟಿಯಲ್ಲಿ ಅವರಿಗಿಂತ ಮುಂದಿದ್ದಾರೆ.
2019ರ ವಿಶ್ವಕಪ್ ಸೆಮಿಫೈನಲ್ ಸೋಲು ನೆನಪಿಸಿದ ಭಾರತದ ಪ್ರದರ್ಶನ
ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಮತ್ತೊಮ್ಮೆ ನೆನಪಿಸಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ತಂಡ ಯಾವುದೇ ರನ್ ಗಳಿಸುವ ಮೊದಲೇ ಮೂರು ವಿಕೆಟ್ ಕಳೆದುಕೊಂಡಿತು.
ಇಶಾನ್ ಕಿಶನ್ (27), ಅಕ್ಷರ್ ಪಟೇಲ್ (21) ಮತ್ತು ನಮನ್ ಧೀರ್ (21) ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು. ಉಳಿದ ಬ್ಯಾಟರ್‌ಗಳು ನ್ಯೂಜಿಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಅಂತಿಮವಾಗಿ ಭಾರತ 26.4 ಓವರ್‌ಗಳಲ್ಲಿ ಕೇವಲ 89 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಆದರೆ ಈ ಸೋಲಿನ ನಡುವೆಯೂ ಕೊಹ್ಲಿ ತೋರಿದ ಕ್ರೀಡಾಸ್ಫೂರ್ತಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.