ಬೆಂಗಳೂರು: ಉದ್ಯಮಿ ಮೋಹನ್‌ದಾಸ್ ಪೈ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ನಾರಾಯಣಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೋಹನ್‌ದಾಸ್ ಪೈ ಅವರನ್ನು ‘ಕಲಿಯುಗದ ಶಕುನಿ’ ಎಂದು ಟೀಕಿಸಿರುವ ಅವರು, ನಾಳೆ ಅವರ ಮನೆ ಅಥವಾ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅವರನ್ನು ಗಡಿಪಾರು ಮಾಡುವಂತೆ ಅಭಿಯಾನ ನಡೆಸುವುದಾಗಿಯೂ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಗೌಡ, ಕನ್ನಡಿಗರ ಜೊತೆಗಿದ್ದುಕೊಂಡೇ ಕನ್ನಡಿಗರ ಉದ್ಯೋಗದ ಹಕ್ಕುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮೋಹನ್‌ದಾಸ್ ಪೈ ವಿರುದ್ಧ ಆರೋಪಿಸಿದ್ದಾರೆ.
ಕನ್ನಡಿಗರು ತೆರಿಗೆ ಪಾವತಿಸುತ್ತಾರೆ. ಉದ್ಯಮಿಗಳಿಗೆ ಈ ನಾಡಿನಲ್ಲಿ ನೆಲ, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೀಗಿರುವಾಗ ಕನ್ನಡಿಗರಿಗೆ ಪ್ರಶ್ನಿಸುವ ಹಕ್ಕು ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾರಿಗೂ ಹೆದರಬಾರದು ಎಂದು ಹೇಳಿದ್ದಾರೆ.
ಮೋಹನ್‌ದಾಸ್ ಪೈ ಅವರು ಪದೇಪದೇ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಕರವೇ ವಿರುದ್ಧ ಸರ್ಕಾರವನ್ನು ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ನಾರಾಯಣಗೌಡ ಆರೋಪಿಸಿದ್ದಾರೆ.
ಸಿನಿಮಾ ನಟರ ವಿರುದ್ಧವೂ ನಾರಾಯಣಗೌಡ ಅಸಮಾಧಾನ:
ಇನ್ನು ಐಟಿ-ಬಿಟಿ ಕಂಪನಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಯಾವುದೇ ಗಲಾಟೆ ಮಾಡಿಲ್ಲ. ಶಾಂತಿಯುತವಾಗಿ ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಅಭಿಯಾನ ನಡೆಸುತ್ತಿದ್ದೇವೆ ಎಂದು ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. ಈ ಹೋರಾಟಕ್ಕೆ ರಾಜ್ಯದ ಮಠಾಧೀಶರು ಬೆಂಬಲ ನೀಡಬೇಕು ಎಂದು ಮನವಿ ಮಾಡಿರುವ ಅವರು, ಕನ್ನಡಿಗರ ಉದ್ಯೋಗದ ಹಕ್ಕಿನ ವಿಚಾರದಲ್ಲಿ ಕನ್ನಡ ಸಿನಿಮಾ ನಟರು ಏಕೆ ಧ್ವನಿ ಎತ್ತುತ್ತಿಲ್ಲ? ಕಲಾವಿದರು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸುವ ಮೂಲಕ ಚಿತ್ರರಂಗದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋಹನ್‌ದಾಸ್ ಪೈ ವಿರುದ್ಧ ರೂಪೇಶ್ ರಾಜಣ್ಣ ಆಕ್ರೋಶ:
ಇದೇ ವಿಚಾರವಾಗಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಮೋಹನ್‌ದಾಸ್ ಪೈ ವಿರುದ್ಧ ಕಿಡಿಕಾರಿದ್ದಾರೆ. ಕನ್ನಡಿಗರ ಆಶಯಗಳಿಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಸರ್ಕಾರ ನೀಡಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ವಾಪಸ್ ನೀಡುವಂತೆ ಆಗ್ರಹಿಸಿದ್ದಾರೆ.
ಮೂರನೇ ದಿನವೂ ಕರವೇ ಅಭಿಯಾನ ಮುಂದುವರಿಕೆ:
ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವಿಶೇಷ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ಮೂರನೇ ದಿನವೂ ಅಭಿಯಾನ ಮುಂದುವರಿದಿದ್ದು, ಇಂದು 120ಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಗಿದೆ.
ನವೆಂಬರ್ 30ರವರೆಗೆ ವಿವಿಧ ಐಟಿ-ಬಿಟಿ ಕಂಪನಿಗಳಿಗೆ ಭೇಟಿ ನೀಡಿ ಕನ್ನಡಿಗರ ಉದ್ಯೋಗದ ಹಕ್ಕಿನ ಕುರಿತು ಮನವಿ ಸಲ್ಲಿಸಲು ಕರವೇ ನಿರ್ಧರಿಸಿದೆ. ಅಲ್ಲದೆ, ಕಂಪನಿಗಳಲ್ಲಿ ಎಷ್ಟು ಕನ್ನಡಿಗರು ಉದ್ಯೋಗದಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲು ಮುಂದಾಗಿದೆ.