ಮಾಂಗ್ ಕೋಕ್: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಸೋಲಿನ ಸರಣಿ ಮುಂದುವರಿದಿದೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ, ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧವೂ ಮುಗ್ಗರಿಸಿದೆ. ಮಿಷನ್ ರೋಡ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 95 ರನ್‌ಗಳ ಗುರಿಯನ್ನು ಯುಎಇ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ ಬೆನ್ನಟ್ಟುವ ಮೂಲಕ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಭಾರತದ ಪರ ನಟರಾಜನ್ ಸಿಕ್ಸರ್ ಅಬ್ಬರ!
ಟಾಸ್ ಗೆದ್ದ ಯುಎಇ ತಂಡದ ನಾಯಕ ಖಾಲಿದ್ ಶಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ನಿತೀಶ್ ರಾಣಾ ಕೇವಲ 6 ರನ್ ಗಳಿಸಿ ಔಟಾದರೆ, ರಾಹುಲ್ ತೆವಾಟಿಯಾ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಶಶಾಂಕ್ ಸಿಂಗ್ ಕೂಡ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು.
ಈ ನಡುವೆ ರಾಹುಲ್ ತ್ರಿಪಾಠಿ 7 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 24 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ನಾಯಕ ಕೃನಾಲ್ ಪಾಂಡ್ಯ 15 ರನ್‌ಗಳ ಕೊಡುಗೆ ನೀಡಿದರು.

ಆದರೆ ಭಾರತದ ಪರ ನಿಜವಾದ ಅಬ್ಬರ ತೋರಿಸಿದ್ದು ವೇಗಿ ಟಿ. ನಟರಾಜನ್. ಕೊನೆಯ ಬ್ಯಾಟರ್ ಆಗಿ ಕಣಕ್ಕಿಳಿದ ನಟರಾಜನ್ ಬ್ಯಾಟ್‌ನಿಂದ ರನ್‌ಗಳ ಸುರಿಮಳೆಯೇ ಹರಿಯಿತು. ಕೇವಲ 14 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 38 ರನ್ ಸಿಡಿಸಿದರು. ಈ ಮೂಲಕ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ನಟರಾಜನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 6 ಓವರ್‌ಗಳಲ್ಲಿ 94 ರನ್ ಗಳಿಸಿ ಆಲೌಟ್ ಆಯಿತು.
4.2 ಓವರ್‌ಗಳಲ್ಲೇ ಯುಎಇಗೆ ಭರ್ಜರಿ ಜಯ!
95 ರನ್‌ಗಳ ಗುರಿ ಬೆನ್ನಟ್ಟಿದ ಯುಎಇ ತಂಡ ಭಾರತದ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಆರಂಭಿಕರಾದ ನಾಯಕ ಖಾಲಿದ್ ಶಾ ಹಾಗೂ ಅನ್ಶ್ ಟಂಡನ್ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಈ ಜೋಡಿ ಕೇವಲ 2.3 ಓವರ್‌ಗಳಲ್ಲೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿತು.
ಖಾಲಿದ್ ಶಾ ಕೇವಲ 14 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ ಅಜೇಯ 52 ರನ್ ಸಿಡಿಸಿ ಮಿಂಚಿದರು. ಮತ್ತೊಂದೆಡೆ ಅನ್ಶ್ ಟಂಡನ್ 12 ಎಸೆತಗಳಲ್ಲಿ 5 ಸಿಕ್ಸರ್‌ಗಳೊಂದಿಗೆ ಅಜೇಯ 39 ರನ್ ಚಚ್ಚಿದರು.
ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಯುಎಇ ತಂಡ ಕೇವಲ 4.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 97 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಉಭಯ ತಂಡಗಳ ಆಟಗಾರರ ಪಟ್ಟಿ
ಯುಎಇ ತಂಡ: ಖಾಲಿದ್ ಶಾ (ನಾಯಕ), ಅನ್ಶ್ ಟಂಡನ್, ಮುಹಮ್ಮದ್ ಝುಹೈಬ್, ಮುಹಮ್ಮದ್ ಫಾರೂಕ್, ಮೊಹಮ್ಮದ್ ಫರಾಝುದ್ದೀನ್, ಝಾಹಿದ್ ಅಲಿ, ಮರೂಫ್ ಮರ್ಚೆಂಟ್.
ಭಾರತ ತಂಡ: ಕೃನಾಲ್ ಪಾಂಡ್ಯ (ನಾಯಕ), ರಾಹುಲ್ ತ್ರಿಪಾಠಿ (ವಿಕೆಟ್ ಕೀಪರ್), ನಿತೀಶ್ ರಾಣಾ, ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ಟಿ. ನಟರಾಜನ್, ಕುಲ್ವಂತ್ ಖೇಜ್ರೋಲಿಯಾ.