ನವದೆಹಲಿ: ಗೀತರಚನೆಕಾರ ಹಾಗೂ ಚಿತ್ರಕಥೆಗಾರ ಜಾವೇದ್ ಅಖ್ತರ್ ಅವರ ಹೇಳಿಕೆಯೊಂದು ಇದೀಗ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮ ಇದ್ದಾನೆ.
ರಾಮ ಕೇವಲ ವ್ಯಕ್ತಿಯಲ್ಲ, ಅದೊಂದು ಜೀವನ ವಿಧಾನ ಹಾಗೂ ನೈತಿಕತೆಯ ಸಂಕೇತ ಎಂದು ಅವರು ಹೇಳಿದ್ದರು. ಈ ಹೇಳಿಕೆಗೆ ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜಾವೇದ್ ಅಖ್ತರ್ ತಮ್ಮ ಹೆಸರನ್ನು ‘ರಾಮ್ ಪಾಲ್’ ಎಂದು ಬದಲಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
ರಾಮನ ಕುರಿತು ಜಾವೇದ್ ಅಖ್ತರ್ ಹೇಳಿದ್ದೇನು?
‘ರಾಮಾಯಣ’ ಸಿನಿಮಾ ಹಾಗೂ ಶಾರುಖ್ ಖಾನ್ ಅಭಿನಯದ ‘ಸ್ವದೇಶ್’ ಚಿತ್ರಕ್ಕಾಗಿ ತಾವು ಬರೆದ ಹಾಡಿನ ಕುರಿತು ಮಾತನಾಡುವ ಸಂದರ್ಭದಲ್ಲಿ ಜಾವೇದ್ ಅಖ್ತರ್ ಈ ಹೇಳಿಕೆ ನೀಡಿದ್ದರು. ‘ಮನ್ ಸೇ ರಾವಣ್ ಜೋ ನಿಕಾಲೇ, ರಾಮ್ ಉಸ್ಕೇ ಮನ್ ಮೇ ಹೈ’ ಎಂಬ ಹಾಡಿನ ಸಾಲುಗಳನ್ನು ಉಲ್ಲೇಖಿಸಿದ್ದ ಅವರು, ರಾಮನ ಪರಿಕಲ್ಪನೆಯು ಧಾರ್ಮಿಕ ಗುರುತನ್ನು ಮೀರಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

ರಾಮ ಕೇವಲ ಒಬ್ಬ ವ್ಯಕ್ತಿಯಲ್ಲ. ರಾಮ ಎಂದರೆ ನೈತಿಕತೆ, ರಾಮ ಒಂದು ಜೀವನ ವಿಧಾನ. ಅದು ನಿರ್ದಿಷ್ಟ ಸೌಂದರ್ಯಪ್ರಜ್ಞೆ ಮತ್ತು ಮೌಲ್ಯಗಳ ಸಂಕೇತ. ಯಾವುದೇ ಧರ್ಮವನ್ನು ಅನುಸರಿಸಿದರೂ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮ ಇದ್ದಾನೆ ಎಂದು ಜಾವೇದ್ ಅಖ್ತರ್ ಹೇಳಿದ್ದರು.
‘ರಾಮ್ ಪಾಲ್ ಎಂದು ಹೆಸರು ಬದಲಿಸಿಕೊಳ್ಳಿ’ ಎಂದ ರಶೀದಿ
ಜಾವೇದ್ ಅಖ್ತರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮೌಲಾನಾ ಸಾಜಿದ್ ರಶೀದಿ, ಅವರ ಮಾತುಗಳ ಹಿಂದೆ ವಾಣಿಜ್ಯ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ತಮ್ಮನ್ನು ನಾಸ್ತಿಕ ಎಂದು ಗುರುತಿಸಿಕೊಳ್ಳುವ ಜಾವೇದ್ ಅಖ್ತರ್ ಈಗ ರಾಮನ ಬಗ್ಗೆ ಇಷ್ಟೊಂದು ಗೌರವದಿಂದ ಮಾತನಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಬಾಲಿವುಡ್ನಲ್ಲಿ ಹಾಡುಗಳನ್ನು ಮಾರಾಟ ಮಾಡಲಾಗುತ್ತದೆ. ಇಂತಹ ಹೇಳಿಕೆಗಳನ್ನು ನೀಡದಿದ್ದರೆ ಅವರ ಹಾಡುಗಳನ್ನು ಯಾರು ಖರೀದಿಸುತ್ತಾರೆ? ಎಂದು ರಶೀದಿ ವ್ಯಂಗ್ಯವಾಡಿದ್ದಾರೆ. ಹಲವು ಸಾರ್ವಜನಿಕ ವೇದಿಕೆಗಳಲ್ಲಿ ಜಾವೇದ್ ಅಖ್ತರ್ ತಾವು ನಾಸ್ತಿಕರು ಮತ್ತು ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ಹೇಳಿಕೊಂಡಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
ಇದೇ ವೇಳೆ, “ನಾಸ್ತಿಕ ಎಂದು ಹೇಳಿಕೊಳ್ಳುವ ವ್ಯಕ್ತಿ ಈಗ ರಾಮನ ಬಗ್ಗೆ ಇಷ್ಟೊಂದು ಭಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ನನ್ನದೊಂದು ಸಲಹೆ, ಜಾವೇದ್ ಅಖ್ತರ್ ಎಂಬ ನಿಮ್ಮ ಹೆಸರನ್ನು ‘ರಾಮ್ ಪಾಲ್’ ಎಂದು ಬದಲಿಸಿಕೊಳ್ಳಿ. ಆಗ ದೇಶದ ಶೇ.80ರಷ್ಟು ಹಿಂದೂ ಜನಸಂಖ್ಯೆಯಿಂದ ನಿಮಗೆ ಸಂಪೂರ್ಣ ಗೌರವ ಮತ್ತು ಮನ್ನಣೆ ಸಿಗಬಹುದು” ಎಂದು ರಶೀದಿ ಟೀಕಿಸಿದ್ದಾರೆ.
ಎರಡು ವಿಭಿನ್ನ ಸೈದ್ಧಾಂತಿಕ ಗುಂಪುಗಳ ನಡುವೆ ಗುರುತಿಸಿಕೊಳ್ಳುವ ಪ್ರಯತ್ನವೇ?
ಜಾವೇದ್ ಅಖ್ತರ್ ವಿಭಿನ್ನ ಸೈದ್ಧಾಂತಿಕ ಗುಂಪುಗಳ ನಡುವೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ರಶೀದಿ ಆರೋಪಿಸಿದ್ದಾರೆ. ಒಂದು ಸ್ಪಷ್ಟವಾದ ನಿಲುವು ತೆಗೆದುಕೊಳ್ಳಬೇಕು. ಆಗ ಆ ಗುಂಪಿನ ಜನರು ಅವರನ್ನು ನಿಜವಾಗಿಯೂ ಗೌರವಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಚಿತ್ರರಂಗದಲ್ಲಿ ಜಾವೇದ್ ಅಖ್ತರ್ ಅವರ ಕುಟುಂಬದ ಸದಸ್ಯರು ನಿರ್ಮಾಣ, ಚಿತ್ರಕಥೆ ಮತ್ತು ಹಾಡುಗಳ ರಚನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರಶೀದಿ ಉಲ್ಲೇಖಿಸಿದ್ದಾರೆ. ಕುಟುಂಬದ ಸದಸ್ಯರು ಪರಸ್ಪರರ ಕೆಲಸವನ್ನು ಹೊಗಳದಿದ್ದರೆ ಅವರ ವ್ಯವಹಾರ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸುವ ಮೂಲಕ, ಜಾವೇದ್ ಅಖ್ತರ್ ಅವರ ಹೇಳಿಕೆಗಳ ಹಿಂದಿನ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
“ನಾನು ಮುಸ್ಲಿಂ, ನನ್ನ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಗೌರವಯುತ ಜೀವನ ನಡೆಸುತ್ತಿದ್ದೇನೆ” ಎಂದಿರುವ ರಶೀದಿ, ಜಾವೇದ್ ಅಖ್ತರ್ ಎರಡು ವಿಭಿನ್ನ ದೋಣಿಗಳಲ್ಲಿ ಕಾಲಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಎರಡೂ ಕಡೆಗಳನ್ನು ಏಕಕಾಲದಲ್ಲಿ ಹಿಡಿದಿಟ್ಟುಕೊಳ್ಳುವ ಅವರ ಪ್ರಯತ್ನ ಸರಿಯಲ್ಲ ಎಂಬುದು ರಶೀದಿ ಅವರ ಅಭಿಪ್ರಾಯವಾಗಿದೆ.