ಬೆಂಗಳೂರು: ರಾತ್ರಿ ವೇಳೆ ವಾಹನ ಸಂಚಾರ ಕಡಿಮೆಯಾಗುತ್ತಿದ್ದಂತೆ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ವೀಲಿಂಗ್ ಚಟುವಟಿಕೆ ಶುರುವಾಗುತ್ತಿದೆ.
ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳು, ಮಾರ್ಪಡಿಸಿದ ಸೈಲೆನ್ಸರ್‌ಗಳು ಹಾಗೂ ವೇಗದ ಚಾಲನೆಯೊಂದಿಗೆ ಯುವಕರ ಗುಂಪು ರಸ್ತೆ ಮೇಲೆಯೇ ವೀಲಿಂಗ್ ಮತ್ತು ಬೈಕ್ ರೇಸ್ ನಡೆಸುತ್ತಿದೆ.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಚಿಕ್ಕಬಿದರಕಲ್ಲು ಫ್ಲೈಓವರ್ ಈ ಚಟುವಟಿಕೆಗಳಿಗೆ ವೇದಿಕೆಯಾಗಿದೆ. ಪಾರ್ಲೆ-ಜಿ ಟೋಲ್ ದಾಟಿದ ಬಳಿಕ ಬರುವ ಫ್ಲೈಓವರ್ ಮೇಲೆ 20ಕ್ಕೂ ಹೆಚ್ಚು ಬೈಕ್, ಸ್ಕೂಟರ್‌ಗಳು ಹಾಗೂ ಒಂದು ಕಾರನ್ನು ನಿಲ್ಲಿಸಿಕೊಂಡು ಯುವಕರು ವೀಲಿಂಗ್ ಮಾಡಿದ್ದಾರೆ.
ವೀಕೆಂಡ್‌ಗಳಾದ ಶುಕ್ರವಾರ, ಶನಿವಾರ ಮತ್ತು ಭಾನುವಾರ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಈ ಚಟುವಟಿಕೆ ನಡೆಯುತ್ತಿದೆ ಎನ್ನಲಾಗಿದೆ. ವಾಹನಗಳಿಗೆ ನಂಬರ್ ಪ್ಲೇಟ್ ಇಲ್ಲದಿದ್ದರೂ ರಸ್ತೆಯಲ್ಲೇ ವೀಲಿಂಗ್ ಮಾಡುತ್ತಿದ್ದಾರೆ. ಕೆಲವರು ಏಕಮುಖ ರಸ್ತೆಯಲ್ಲಿಯೂ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುತ್ತಿದ್ದಾರೆ.

21 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಬಸ್, ಲಾರಿ ಸೇರಿದಂತೆ ಇತರ ವಾಹನಗಳ ಸಂಚಾರದ ನಡುವೆಯೇ ಯುವಕರು ವೀಲಿಂಗ್ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಇಷ್ಟೆಲ್ಲ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸರ ಭಯವಿಲ್ಲದೆ ಯುವಕರು ವೀಲಿಂಗ್ ಮಾಡುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಸಂಪೂರ್ಣ ದೃಶ್ಯಗಳು ಸೆರೆಯಾಗಿವೆ. ಸಂಚಾರಿ ಪೊಲೀಸರು ಸ್ಥಳದಲ್ಲಿ ನಿಗಾ ವಹಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.