ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜೈಲಿನಲ್ಲಿ ಸಹ ಕೈದಿಗಳಿಂದ ಮಾನಸಿಕ ಕಿರಿಕಿರಿ ಅನುಭವಿಸುತ್ತಿರುವುದಾಗಿ ಆರೋಪಿಸಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಹಿಳಾ ಬ್ಯಾರಕ್‌ನಲ್ಲಿ ವಿದೇಶಿ ಪ್ರಜೆಗಳಿಂದ ತೊಂದರೆಯಾಗುತ್ತಿದ್ದು, ಮಧ್ಯರಾತ್ರಿಯಾದರೂ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಗೌಡ, ತಾವು ಇರುವ ಮಹಿಳಾ ಬ್ಯಾರಕ್‌ನಿಂದ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಒಂದೇ ಬ್ಯಾರಕ್‌ನಲ್ಲಿ 30 ಕೈದಿಗಳು!
ಪವಿತ್ರಾ ಗೌಡ ಇರುವ ಮಹಿಳಾ ಬ್ಯಾರಕ್‌ನಲ್ಲಿ ಸುಮಾರು 30 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ ಎನ್ನಲಾಗಿದೆ. ಇವರಲ್ಲಿ ಕೆಲವು ನೈಜೀರಿಯಾ ಮೂಲದ ಮಹಿಳಾ ಕೈದಿಗಳಿಂದ ನಿರಂತರ ಕಿರಿಕಿರಿ ಉಂಟಾಗುತ್ತಿದೆ ಎಂದು ಪವಿತ್ರಾ ಗೌಡ ಆರೋಪಿಸಿದ್ದಾರೆ.

ರಾತ್ರಿಯ ವೇಳೆಯಲ್ಲೂ ಸಹ ಕೈದಿಗಳಿಂದ ತೊಂದರೆಯಾಗುತ್ತಿದ್ದು, ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಾನಸಿಕ ಒತ್ತಡ ಎದುರಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕೋರ್ಟ್ ಸೂಚಿಸಿದರೂ ಬ್ಯಾರಕ್ ಬದಲಿಸಿಲ್ಲವಂತೆ!
ಈ ಹಿಂದೆಯೂ ಪವಿತ್ರಾ ಗೌಡ ಬ್ಯಾರಕ್ ಬದಲಾವಣೆ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆಗ ಜೈಲು ನಿಯಮಾವಳಿಗಳ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಧೀಶರು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ, ನ್ಯಾಯಾಲಯದ ಸೂಚನೆಯ ಬಳಿಕವೂ ತಮ್ಮನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಿಲ್ಲ ಎಂದು ಪವಿತ್ರಾ ಗೌಡ ಆರೋಪಿಸಿದ್ದಾರೆ.
ನ್ಯಾಯಾಧೀಶರೇ ಜೈಲಿಗೆ ಬಂದು ಪರಿಶೀಲಿಸಲಿ!
ಅಕ್ಟೋಬರ್ 13ರಂದು ನಡೆದ ವಿಚಾರಣೆ ವೇಳೆ ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಅವರು ಮತ್ತೆ ಬ್ಯಾರಕ್ ಬದಲಾವಣೆಗೆ ಮನವಿ ಸಲ್ಲಿಸಿದ್ದಾರೆ.
ಜೈಲಿನಲ್ಲಿರುವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರು ಮಹಿಳಾ ಬ್ಯಾರಕ್‌ಗೆ ಭೇಟಿ ನೀಡಬೇಕು ಎಂದು ಪವಿತ್ರಾ ಗೌಡ ಕೋರಿದ್ದಾರೆ.
ಆರೋಗ್ಯದಲ್ಲಿ ಏರುಪೇರು: ವೈದ್ಯಕೀಯ ವರದಿ ಸಲ್ಲಿಕೆ
ಸಹ ಕೈದಿಗಳಿಂದ ಉಂಟಾಗುತ್ತಿರುವ ಕಿರಿಕಿರಿಯಿಂದ ತಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಿದೆ ಎಂದು ಪವಿತ್ರಾ ಗೌಡ ಆರೋಪಿಸಿದ್ದಾರೆ. ಈ ಸಂಬಂಧ ವೈದ್ಯಕೀಯ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಜೈಲಿನಲ್ಲಿರುವ ಪರಿಸ್ಥಿತಿ ಹಾಗೂ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ.
ಜೈಲು ಅಧಿಕಾರಿಗಳಿಂದ ವರದಿ ಕೇಳಿದ ಕೋರ್ಟ್!
ಪವಿತ್ರಾ ಗೌಡ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ, ಬ್ಯಾರಕ್ ಬದಲಾವಣೆ ವಿಚಾರವಾಗಿ ಜೈಲು ಅಧಿಕಾರಿಗಳಿಂದ ವರದಿ ಕೇಳಿದೆ.
ಜೈಲು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳು ಹಾಗೂ ಮಹಿಳಾ ಬ್ಯಾರಕ್‌ನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ನ್ಯಾಯಾಲಯ ಮುಂದಾಗಿದೆ. ಸದ್ಯ ಪವಿತ್ರಾ ಗೌಡ ಅವರ ಆರೋಪಗಳ ಕುರಿತು ಜೈಲು ಅಧಿಕಾರಿಗಳ ವರದಿ ಹಾಗೂ ನ್ಯಾಯಾಲಯದ ಮುಂದಿನ ಆದೇಶ ಮಹತ್ವ ಪಡೆದುಕೊಂಡಿದೆ.