ಅಕ್ಷರ ಗಾತ್ರ

ಕಬಾಬ್ ಸೆಂಟರ್‌ಗೆ ನುಗ್ಗಿದ ಪಜೆರೊ ಕಾರು; ಬಿಸಿ ಎಣ್ಣೆಯಿಂದ ಮೂವರಿಗೆ ಗಂಭೀರ ಗಾ*ಯ!

ಬನ್ನೇರುಘಟ್ಟ ಬಳಿಯ ಕಬಾಬ್ ಸೆಂಟರ್‌ ಮುಂದೆ ಪಜೆರೊ ಕಾರು ಡಿಕ್ಕಿ ಹೊಡೆದ ನಂತರ ನಿಂತಿರುವ ದೃಶ್ಯ.

ಬೆಂಗಳೂರು: ರಸ್ತೆಯಲ್ಲಿ ವೇಗವಾಗಿ ಬಂದ ಪಜೆರೊ ಕಾರು ನಿಯಂತ್ರಣ ತಪ್ಪಿ ನೇರವಾಗಿ ಕಬಾಬ್ ಅಂಗಡಿಗೆ ನುಗ್ಗಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬನ್ನೇರುಘಟ್ಟ ಸಮೀಪದ ಹೊಮ್ಮದೇವನಹಳ್ಳಿಯಲ್ಲಿ ನಡೆದಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ಗಳು ಹಾನಿಗೊಳಗಾಗಿದ್ದು, ಅಂಗಡಿಯಲ್ಲಿದ್ದ ವಸ್ತುಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿವೆ.

ಅಕ್ಟೋಬರ್ 30ರಂದು ನಡೆದ ಈ ಅಪಘಾತದ ವೇಳೆ ಸಜೀನಾ ಬೇಗಂ ಎಂಬುವರು ಪಜೆರೊ ಸ್ಪೋರ್ಟ್ಸ್ ಕಾರು (KA-05-MR-3925) ಚಲಾಯಿಸುತ್ತಿದ್ದರು. ಅತಿವೇಗವಾಗಿ ಬಂದ ಕಾರು ಚಾಲಕಿಯ ನಿಯಂತ್ರಣ ತಪ್ಪಿ ಮೊದಲು ರಸ್ತೆಯಲ್ಲಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಹಳೇವೂರಮ್ಮ ಕಬಾಬ್ ಸೆಂಟರ್‌ಗೆ ನುಗ್ಗಿದೆ.

ಕಾರಿನ ಡಿಕ್ಕಿಯಿಂದ ಅಂಗಡಿಯಲ್ಲಿದ್ದ ಕಬಾಬ್ ತಯಾರಿಸುವ ಪಾತ್ರೆಗಳು ಹಾಗೂ ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಇದೇ ವೇಳೆ ಅಡುಗೆಗೆ ಬಳಸುತ್ತಿದ್ದ ಕುದಿಯುವ ಬಿಸಿ ಎಣ್ಣೆ ಅಲ್ಲಿದ್ದವರ ಮೈಮೇಲೆ ಬಿದ್ದಿದೆ. ಪರಿಣಾಮ ಬಸವರಾಜ್, ಮುನಿಕೃಷ್ಣ ಮತ್ತು ಮಂಜೇಶ್ ಎಂಬುವರು ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುವಂತಾಗಿದೆ.

ಆಸ್ಪತ್ರೆಗೆ ದಾಖಲಾದ ಗಾಯಾಳುಗಳು:

ಗಾಯಗೊಂಡ ಮೂವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆಡೆಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಬೇರೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಅಪಘಾತದ ಮಾಹಿತಿ ತಿಳಿದ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಚಲಾಯಿಸುತ್ತಿದ್ದ ಸಜೀನಾ ಬೇಗಂ ಹಾಗೂ ಅಪಘಾತಕ್ಕೆ ಕಾರಣವಾದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.