ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆಗಳ ಸುತ್ತ ಕೇಳಿಬಂದ ಅಕ್ರಮಗಳ ಆರೋಪಗಳ ಬೆನ್ನಲ್ಲೇ ಇದೀಗ ಮತ್ತೊಂದು ಮಹತ್ವದ ಪರೀಕ್ಷೆಗೆ ವೇದಿಕೆ ಸಿದ್ಧವಾಗಿದೆ.
ರಾಜ್ಯದಲ್ಲಿ ಇಂದು 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗಾಗಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಈ ಬಾರಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಕರ್ನಾಟಕ ಲೋಕಸೇವಾ ಆಯೋಗ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮೊಬೈಲ್ ನಿಷೇಧದಿಂದ ಹಿಡಿದು ಐದು ಆಯ್ಕೆಗಳ ಪದ್ಧತಿಯವರೆಗೆ ಹಲವು ಸುಧಾರಣೆಗಳನ್ನು ಪರಿಚಯಿಸಲಾಗಿದೆ.
ರಾಜ್ಯದ 15 ಜಿಲ್ಲೆಗಳ 345 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬರೋಬ್ಬರಿ 1.47 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಮೇಲೆ ನಿಗಾ ಇರಿಸಲಾಗುತ್ತದೆ.
319 ಹುದ್ದೆಗಳಿಗೆ 1.47 ಲಕ್ಷ ಅಭ್ಯರ್ಥಿಗಳ ಪೈಪೋಟಿ

ಈ ಬಾರಿ ಒಟ್ಟು 319 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ 202 ಗ್ರೂಪ್ ಬಿ ಹಾಗೂ 117 ಗ್ರೂಪ್ ಎ ಹುದ್ದೆಗಳಿವೆ. ಪರೀಕ್ಷೆಗೆ ನೋಂದಾಯಿಸಿಕೊಂಡಿರುವವರಲ್ಲಿ 91,238 ಪುರುಷರು ಮತ್ತು 53,074 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮೊದಲ ಪತ್ರಿಕೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ಎರಡನೇ ಪತ್ರಿಕೆ ನಡೆಯಲಿದೆ. ಪ್ರತಿ ಪತ್ರಿಕೆಯಲ್ಲಿ 100 ಪ್ರಶ್ನೆಗಳಿದ್ದು, 200 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ಗೆ ಸಂಪೂರ್ಣ ನಿಷೇಧ!
ಪರೀಕ್ಷಾ ಅಕ್ರಮಗಳನ್ನು ತಡೆಯಲು ಈ ಬಾರಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ಗಳೊಂದಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ಪರೀಕ್ಷಾ ಕೇಂದ್ರದ ಆವರಣಕ್ಕೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೂ ಅವಕಾಶವಿರುವುದಿಲ್ಲ. ಅನುಮತಿ ಪಡೆದವರಿಗೂ ಭದ್ರತಾ ತಪಾಸಣೆ ಕಡ್ಡಾಯವಾಗಿದೆ.
ಇನ್ನು ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇವರಲ್ಲಿ ಒಬ್ಬರು ಕಡ್ಡಾಯವಾಗಿ ಸರ್ಕಾರಿ ಕಾಲೇಜಿನ ಸಿಬ್ಬಂದಿಯಾಗಿರಬೇಕು. ಅಭ್ಯರ್ಥಿಗಳ ಗುರುತಿನ ಚೀಟಿ ಪರಿಶೀಲನೆ, ತಪಾಸಣೆ ಹಾಗೂ ಪರೀಕ್ಷಾ ಕೊಠಡಿಯಲ್ಲಿನ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿದೆ.
ಉತ್ತರ ಗೊತ್ತಿಲ್ಲದಿದ್ದರೂ ಐದನೇ ಆಯ್ಕೆ ಗುರುತಿಸಲೇಬೇಕು!
ಈ ಬಾರಿಯ ಪರೀಕ್ಷೆಯ ಮತ್ತೊಂದು ವಿಶೇಷವೆಂದರೆ ಐದು ಆಯ್ಕೆಗಳ ಪದ್ಧತಿ. ಅಭ್ಯರ್ಥಿಗಳಿಗೆ ಪ್ರಶ್ನೆಯ ಉತ್ತರ ತಿಳಿದಿಲ್ಲದಿದ್ದರೂ ಐದನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತಿಸಬೇಕು. ಯಾವುದೇ ಪ್ರಶ್ನೆಯನ್ನು ಖಾಲಿ ಬಿಡುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗಿದೆ.
ಇದರ ಜೊತೆಗೆ ಒಎಂಆರ್ ಹಾಳೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ತ್ರಿಪ್ರತಿ ವ್ಯವಸ್ಥೆ ಮಾಡಲಾಗಿದೆ. ಒಂದು ಪ್ರತಿಯನ್ನು ಅಭ್ಯರ್ಥಿಗೆ ನೀಡಲಾಗುತ್ತದೆ. ಇನ್ನೊಂದು ಪ್ರತಿಯನ್ನು ಕೆಪಿಎಸ್ಸಿ ಮೌಲ್ಯಮಾಪನಕ್ಕೆ ಬಳಸುತ್ತದೆ. ಮೂರನೇ ಪ್ರತಿಯನ್ನು ಜಿಲ್ಲಾಧಿಕಾರಿ ಅಥವಾ ಕೆಪಿಎಸ್ಸಿ ಸ್ಟ್ರಾಂಗ್ ರೂಮ್ನಲ್ಲಿ ಸುರಕ್ಷಿತವಾಗಿ ಇರಿಸಲಾಗುತ್ತದೆ.
ಪರೀಕ್ಷೆ ಮುಗಿದ ದಿನವೇ ಒಎಂಆರ್ ವೆಬ್ಸೈಟ್ನಲ್ಲಿ ಲಭ್ಯ!
ಅಭ್ಯರ್ಥಿಗಳಿಗೆ ಮತ್ತೊಂದು ಮಹತ್ವದ ಅನುಕೂಲ ಕಲ್ಪಿಸಲು ಕೆಪಿಎಸ್ಸಿ ನಿರ್ಧರಿಸಿದೆ. ಪರೀಕ್ಷೆ ನಡೆದ ದಿನವೇ ಸ್ಕ್ಯಾನ್ ಮಾಡಿದ ಎಲ್ಲಾ ಒಎಂಆರ್ ಪ್ರತಿಗಳನ್ನು ಆಯೋಗದ ವೆಬ್ಸೈಟ್ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅಪ್ಲೋಡ್ ಮಾಡಲಾಗುತ್ತದೆ. ಇದಕ್ಕಾಗಿ 12 ಜಿಲ್ಲೆಗಳಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಜಾಮರ್ಗಳನ್ನು ಅಳವಡಿಸಲಾಗಿದೆ. ಜಾಮರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ದೃಢೀಕರಿಸಬೇಕು ಎಂದು ಸೂಚಿಸಲಾಗಿದೆ.
ಇನ್ನು ಪರೀಕ್ಷಾ ಅಕ್ರಮಗಳಿಗೆ ಅವಕಾಶ ನೀಡುವ ಖಾಸಗಿ ಕಾಲೇಜುಗಳ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಅಕ್ರಮಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ಪರೀಕ್ಷೆಗಳಲ್ಲಿ ನಕಲಿ ಅಭ್ಯರ್ಥಿಗಳ ಪ್ರವೇಶ ತಡೆಯಲು ಆಧಾರ್ ಆಧಾರಿತ ಗುರುತಿನ ಪರಿಶೀಲನಾ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆದಿದೆ.
ಒಟ್ಟಿನಲ್ಲಿ, ಹಲವು ಅಕ್ರಮಗಳ ಆರೋಪಗಳ ಬಳಿಕ ನಡೆಯುತ್ತಿರುವ ಕೆಎಎಸ್ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಕೆಪಿಎಸ್ಸಿ ಹಲವು ಬದಲಾವಣೆಗಳನ್ನು ತಂದಿದೆ. ಈ ಹೊಸ ನಿಯಮಗಳು ಪರೀಕ್ಷಾ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆ ತರಲಿವೆ ಎಂಬುದನ್ನು ಕಾದು ನೋಡಬೇಕಿದೆ.