ಬೆಂಗಳೂರು: ಪತ್ನಿ ಹಾಗೂ ಆಕೆಯ ತವರು ಮನೆಯ ಆರು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಹತ್ಯೆ ಮಾಡಿದ ಆರೋಪದ ಮೇಲೆ ಕ್ಯಾಬ್ ಚಾಲಕ ಇಂದುಶೇಖರ್ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಸುಮಾರು 15ರಿಂದ 20 ದಿನಗಳ ಅವಧಿಯಲ್ಲಿ ಕುಟುಂಬದ ಸದಸ್ಯರನ್ನು ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿಕೊಂಡು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಆರೋಪಿ ‘ಠಾಣಾ ವರದಿ’ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಿದ್ದ ಇಂದುಶೇಖರ್, ಸುಮಾರು ಎರಡು ದಶಕಗಳ ಹಿಂದೆ ಸುನೀತಾ ಅವರನ್ನು ವಿವಾಹವಾಗಿದ್ದ. ಸುನೀತಾ ಅವರು ಶ್ರೀರಾಮಪುರದಲ್ಲಿರುವ ತವರು ಮನೆಗೆ ಹೋಗಿ ಬರುತ್ತಿದ್ದ ವಿಚಾರಕ್ಕೆ ದಂಪತಿ ನಡುವೆ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಪತ್ನಿ ತವರು ಮನೆಗೆ ಹೋಗುವುದನ್ನು ಇಂದುಶೇಖರ್ ವಿರೋಧಿಸುತ್ತಿದ್ದ. ಆದರೆ ಸುನೀತಾ ಅವರಿಗೆ ತಾಯಿ ಹಾಗೂ ಸಹೋದರರು ಬೆಂಬಲ ನೀಡುತ್ತಿದ್ದರು.
ಈ ವಿಚಾರವಾಗಿ ಹಲವು ಬಾರಿ ರಾಜಿ ಪಂಚಾಯಿತಿ ನಡೆದಿದ್ದರೂ ದಂಪತಿ ನಡುವಿನ ಭಿನ್ನಾಭಿಪ್ರಾಯ ಬಗೆಹರಿದಿರಲಿಲ್ಲ. ತನ್ನ ವೈವಾಹಿಕ ಜೀವನಕ್ಕೆ ಪತ್ನಿಯ ಕುಟುಂಬವೇ ಅಡ್ಡಿಯಾಗಿದೆ ಎಂದು ಭಾವಿಸಿದ್ದ ಆರೋಪಿ, ಅವರ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಇಂದುಶೇಖರ್ ಮೊದಲು ಪತ್ನಿ ಸುನೀತಾ ಅವರ ತಲೆಗೆ ರುಬ್ಬುಗುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಕಾರಿನಲ್ಲಿ ನಂದಿ ಬೆಟ್ಟಕ್ಕೆ ಕೊಂಡೊಯ್ದು ಎಸೆದಿದ್ದಾನೆ ಎನ್ನಲಾಗಿದೆ. ಸುನೀತಾ ಅವರ ಮೊಬೈಲ್ ಸ್ವಿಚ್ ಆಫ್ ಮಾಡಿ, ಆಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ನೆರೆಹೊರೆಯವರು ಹಾಗೂ ಸಂಬಂಧಿಕರನ್ನು ನಂಬಿಸಲು ಪ್ರಯತ್ನಿಸಿದ್ದಾನೆ ಎಂಬ ಆರೋಪವಿದೆ.

ಇದಾದ ಬಳಿಕ ಮನೆಯಲ್ಲಿ ಮದ್ಯದ ಪಾರ್ಟಿ ಮಾಡುವ ನೆಪದಲ್ಲಿ ಶಿವಕುಮಾರ್ ಮತ್ತು ಶಂಕರ್ ಅವರನ್ನು ಕರೆಸಿಕೊಂಡು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಶಂಕರ್ ಅವರ ಪತ್ನಿ ನಳಿನಿ, ಶಿವಕುಮಾರ್ ಅವರ ಪತ್ನಿ ದಿವ್ಯಾ, ಅತ್ತೆ ರೂಪಾವತಿ ಹಾಗೂ ಶಂಕರ್ ಅವರ ಪುತ್ರ ಪುನೀತ್ ಅವರನ್ನು ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಹತ್ಯೆ ಮಾಡಿದ ಬಳಿಕ ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಿಗೆ ಸಾಗಿಸಿ ಎಸೆದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಕೃತ್ಯದ ಸುಳಿವು ಸಿಗದಂತೆ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಸ್ವಚ್ಛಗೊಳಿಸಿದ್ದಲ್ಲದೆ, ಕೊಲೆಗೆ ಬಳಸಿದ್ದ ರುಬ್ಬುಗುಂಡನ್ನು ರಾಸಾಯನಿಕ ಬಳಸಿ ಶುದ್ಧಗೊಳಿಸಿದ್ದ ಎನ್ನಲಾಗಿದೆ. ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಕಾರು ಹಾಗೂ ರುಬ್ಬುಗುಂಡನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇನ್ನು ಸುನೀತಾ ಅವರ ಕುಟುಂಬದ ಸದಸ್ಯರು ನಿಗೂಢವಾಗಿ ನಾಪತ್ತೆಯಾಗಿರುವ ಸಂಬಂಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಳಿನಿ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಅನುಮಾನಗೊಂಡ ಪೊಲೀಸರು ಇಂದುಶೇಖರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆರಂಭದಲ್ಲಿ ಆತ ಗೊಂದಲದ ಹೇಳಿಕೆಗಳನ್ನು ನೀಡಿದ್ದ ಎನ್ನಲಾಗಿದೆ. ಬಳಿಕ ಆತನ ಮನೆಯನ್ನು ಪರಿಶೀಲಿಸಿದಾಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಸುಳಿವುಗಳು ಪತ್ತೆಯಾಗಿದ್ದವು. ತೀವ್ರ ವಿಚಾರಣೆ ನಡೆಸಿದಾಗ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಯಿಂದ ಮಾಹಿತಿ ಪಡೆದ ಪೊಲೀಸರು ಆತನನ್ನು ನಂದಿ ಬೆಟ್ಟಕ್ಕೆ ಕರೆದೊಯ್ದು ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಹಲವು ಗಂಟೆಗಳ ಹುಡುಕಾಟದ ಬಳಿಕ ಪುನೀತ್ ಅವರ ಮೃತದೇಹ ಪತ್ತೆಯಾಗಿದೆ. ಉಳಿದ ಮೃತದೇಹಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿದಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿಗಳನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದ್ದು, ಉಳಿದ ಮೃತದೇಹಗಳ ಪತ್ತೆ ಹಾಗೂ ಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ಮುಂದುವರಿದಿದೆ.