ಅಕ್ಷರ ಗಾತ್ರ

ಬೆಂಗಳೂರಿನ 7 ಜನರ ಹ*ತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಗಳ ಮನಸ್ಸಿನಲ್ಲಿ ತಾಯಿಯ ವಿರುದ್ಧ ದ್ವೇಷ ಬಿತ್ತಿದ್ದ ಆರೋಪಿ ಇಂದುಶೇಖರ್?

Bengaluru ನಲ್ಲಿ ಏಳು ಮಂದಿಯ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್ ಮತ್ತು ಸಂತ್ರಸ್ತರ ಭಾವಚಿತ್ರಗಳು.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿಗಳು ಹೊರಬರುತ್ತಿವೆ. ಪತ್ನಿ ಸುನೀತಾ ಸೇರಿದಂತೆ ಆಕೆಯ ಕುಟುಂಬದ ಆರು ಮಂದಿಯನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಇಂದುಶೇಖರ್, ತನ್ನ ಮಗಳ ಮನಸ್ಸಿನಲ್ಲಿ ತಾಯಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ದ್ವೇಷ ಮೂಡಿಸುತ್ತಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿದೆ ಎನ್ನಲಾಗಿದೆ.

ಕೌಟುಂಬಿಕ ಕಲಹವೇ ಈ ಭೀಕರ ಹತ್ಯೆಗಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಇಂದುಶೇಖರ್ ತನ್ನ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಮಗಳ ಬಳಿ ನಿರಂತರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ.

‘ನಿಮ್ಮ ಅಮ್ಮನ ಕುಟುಂಬದವರಿಂದಲೇ ನನಗೆ ಈ ಸ್ಥಿತಿ ಬಂದಿದೆ. ನಾನು ಸಂಪಾದನೆ ಮಾಡುವುದಕ್ಕೂ ನಿಮ್ಮ ಅಮ್ಮ ಬಿಡುತ್ತಿಲ್ಲ. ಕೆಲಸಕ್ಕೆ ಹೋಗಲು ನಿಮ್ಮ ಅಜ್ಜಿ ಸಮಸ್ಯೆ ಮಾಡುತ್ತಿದ್ದಾಳೆ. ಹೀಗೆಯೇ ಮುಂದುವರಿದರೆ ನಾನು ಬದುಕುವುದಿಲ್ಲ’ ಎಂದು ಮಗಳ ಬಳಿ ಹೇಳುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.

ಅಷ್ಟೇ ಅಲ್ಲದೆ, ತಾನು ದಿನವಿಡೀ ದುಡಿದು ಕುಟುಂಬವನ್ನು ಸಾಕುತ್ತಿದ್ದರೂ ಪತ್ನಿ ತನ್ನೊಂದಿಗೆ ಜಗಳ ಮಾಡುತ್ತಿದ್ದಾಳೆ ಎಂದು ಮಗಳ ಬಳಿ ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ. ಪತ್ನಿಯ ನಡತೆಯ ಬಗ್ಗೆಯೂ ಆರೋಪಗಳನ್ನು ಮಾಡುತ್ತಾ ಮಗಳ ಮನಸ್ಸಿನಲ್ಲಿ ತಾಯಿಯ ವಿರುದ್ಧ ನಕಾರಾತ್ಮಕ ಭಾವನೆ ಮೂಡಿಸಲು ಪ್ರಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಮನೆಯಲ್ಲಿ ತಂದೆ-ತಾಯಿಯ ನಡುವೆ ನಡೆಯುತ್ತಿದ್ದ ಜಗಳಗಳಿಂದ ಬೇಸತ್ತಿದ್ದ ಮಗಳು ತಂದೆಯೊಂದಿಗೆ ಹೆಚ್ಚು ಆತ್ಮೀಯತೆ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣದಲ್ಲಿ ಆಕೆಯ ಪಾತ್ರವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ಕುರಿತು ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

ಇನ್ನೊಂದೆಡೆ, ಏಳು ಮಂದಿಯ ಹತ್ಯೆಯ ಬಳಿಕ ಮೃತದೇಹಗಳನ್ನು ವಿವಿಧ ಸ್ಥಳಗಳಿಗೆ ಸಾಗಿಸಲು ಆರೋಪಿ ಇಂದುಶೇಖರ್ ತನ್ನ ಇಟಿಯೋಸ್ ಕಾರನ್ನು ಬಳಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತದೇಹಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಯತೀನ್ ಎಂಬಾತ ಅದನ್ನು ಗಮನಿಸಿದ್ದಾನೆ ಎನ್ನಲಾಗಿದೆ.

ಆ ವೇಳೆ ಕಾರಿನಲ್ಲಿ ಏನಿದೆ ಎಂದು ಕೇಳಿದಾಗ, ‘ಕಸ ಇದೆ, ಬಿಸಾಡಿ ಬರುತ್ತೇನೆ’ ಎಂದು ಇಂದುಶೇಖರ್ ಹೇಳಿ ಅಲ್ಲಿಂದ ತೆರಳಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.

ಮೃತದೇಹಗಳನ್ನು ಸಾಗಿಸುವ ಎರಡು ದಿನಗಳ ಹಿಂದೆಯೇ ಹತ್ಯೆ ನಡೆಸಿ, ಅವುಗಳನ್ನು ಮೂಟೆ ಕಟ್ಟಿ ಇಟ್ಟಿದ್ದ ಎಂಬ ಮಾಹಿತಿಯೂ ತನಿಖಾ ಮೂಲಗಳಿಂದ ತಿಳಿದುಬಂದಿದೆ.

ಸದ್ಯ ಆರೋಪಿ ಇಂದುಶೇಖರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಗೆ ನಿಖರ ಕಾರಣವೇನು, ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಹಾಗೂ ಮೃತದೇಹಗಳನ್ನು ಎಲ್ಲೆಲ್ಲಿ ಎಸೆಯಲಾಗಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಅಪರಾಧ ಮತ್ತು ಕಾನೂನು ವರದಿಗಾರರು (Crime & Legal Reporter)

NTV ಕನ್ನಡ ಸಂಪಾದಕೀಯ ತಂಡ.