ಅಕ್ಷರ ಗಾತ್ರ

ಕೇಂದ್ರ ಗೃಹಮಂತ್ರಿಗಳ ದಕ್ಷತಾ ಪದಕ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಶೋಭಾ ಸೇರಿ ರಾಜ್ಯದ 7 ಮಂದಿಗೆ ಗೌರವ

ದಕ್ಷತಾ ಪದಕ ಪುರಸ್ಕೃತ ಇನ್‌ಸ್ಪೆಕ್ಟರ್ Shobha N ಸೇರಿದಂತೆ ಕರ್ನಾಟಕದ ನಾಲ್ವರು ಪೊಲೀಸ್ ಅಧಿಕಾರಿಗಳು.

ಬೆಂಗಳೂರು: 2026ನೇ ಸಾಲಿನ ಕೇಂದ್ರ ಗೃಹಮಂತ್ರಿಗಳ ದಕ್ಷತಾ ಪದಕಕ್ಕೆ ಕರ್ನಾಟಕದ ಪೊಲೀಸ್ ಇಲಾಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಒಟ್ಟು ಏಳು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಅಪರಾಧ ತನಿಖೆ ಹಾಗೂ ವಿಧಿವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆ,

ವೃತ್ತಿಪರ ದಕ್ಷತೆ ಮತ್ತು ಕರ್ತವ್ಯನಿಷ್ಠೆಯನ್ನು ಪರಿಗಣಿಸಿ ಕೇಂದ್ರ ಗೃಹ ಸಚಿವಾಲಯ ಈ ಗೌರವ ಘೋಷಿಸಿದೆ. ವಿಶೇಷವಾಗಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಶೋಭಾ ಎನ್. ಅವರಿಗೂ ಈ ಪ್ರತಿಷ್ಠಿತ ಪದಕ ಲಭಿಸಿದೆ.

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆಂಗಳೂರಿನ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶೋಭಾ ಎನ್. ಅವರು ಕೇಂದ್ರ ಗೃಹಮಂತ್ರಿಗಳ ದಕ್ಷತಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ತನಿಖೆಯಲ್ಲಿ ಕಾರ್ಯನಿರ್ವಹಿಸಿದ್ದ ಶೋಭಾ ಅವರ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಇನ್‌ಸ್ಪೆಕ್ಟರ್ ಶೋಭಾ ಎನ್. ಅವರೊಂದಿಗೆ ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬಾವುದ್ದೀನ್ ರುಕ್ಮುದ್ದೀನ್ ಗಡೇಕರ್, ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯ ಇನ್‌ಸ್ಪೆಕ್ಟರ್ ಎಂ. ಶ್ರೀನಿವಾಸ್ ರಾವ್ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ಅವರು ತನಿಖಾ ವಿಭಾಗದಲ್ಲಿ ದಕ್ಷತಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಇವರ ಜೊತೆಗೆ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಕೆ. ರತ್ನಮ್ಮ ಹಾಗೂ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಹೆಡ್‌ಕಾನ್‌ಸ್ಟೇಬಲ್ ವೈ. ಬಾಲಕೃಷ್ಣ ಅವರಿಗೂ ಪದಕ ಘೋಷಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ವಿಭಾಗದಲ್ಲಿ ಮೈಸೂರಿನ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ (ಆರ್‌ಎಫ್‌ಎಸ್‌ಎಲ್) ಉಪನಿರ್ದೇಶಕ ಡಾ. ಚಂದ್ರಶೇಖರ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಅಪರಾಧ ಪ್ರಕರಣಗಳ ತನಿಖೆಯಲ್ಲಿ ತೋರಿದ ಅತ್ಯುತ್ತಮ ಕಾರ್ಯಕ್ಷಮತೆ, ವೃತ್ತಿಪರ ನೈಪುಣ್ಯ, ದಕ್ಷತೆ ಹಾಗೂ ನಿಸ್ವಾರ್ಥ ಕರ್ತವ್ಯನಿಷ್ಠೆಯನ್ನು ಗುರುತಿಸಿ ಕೇಂದ್ರ ಗೃಹ ಸಚಿವಾಲಯ ಪ್ರತಿ ವರ್ಷ ದಕ್ಷತಾ ಪದಕವನ್ನು ನೀಡುತ್ತದೆ. ತನಿಖಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮವನ್ನು ಗೌರವಿಸುವುದರ ಜೊತೆಗೆ ಅಪರಾಧ ತನಿಖೆಯಲ್ಲಿ ಉನ್ನತ ವೃತ್ತಿಪರ ಗುಣಮಟ್ಟವನ್ನು ಪ್ರೋತ್ಸಾಹಿಸುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ.

ರಾಷ್ಟ್ರೀಯ ಏಕತಾ ದಿನವಾದ ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಗೃಹ ಸಚಿವಾಲಯ 2026ನೇ ಸಾಲಿನ ದಕ್ಷತಾ ಪದಕ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ದೇಶಾದ್ಯಂತ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರೀಯ ಪೊಲೀಸ್ ಸಂಸ್ಥೆಗಳ ಒಟ್ಟು 490 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಕರ್ನಾಟಕದಿಂದ ಪೊಲೀಸ್ ಇಲಾಖೆಯ ಆರು ಮಂದಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಒಬ್ಬ ಅಧಿಕಾರಿ ಸೇರಿದಂತೆ ಒಟ್ಟು ಏಳು ಮಂದಿ ಈ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗಿದ್ದಾರೆ. ರಾಜ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಈ ಸಾಧನೆಗೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.